ಬೆಂಗಳೂರು: ಬಿಜೆಪಿಯು ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ 104 ಸ್ಥಾನ ಪಡೆದಿತ್ತು. ಈಗ ಒಟ್ಟು 120 ಸ್ಥಾನ ಇವೆ. ಅದನ್ನು 150ಕ್ಕೆ ಹೆಚ್ಚಿಸಲು ಅನುಸರಿಸಬೇಕಾದ ಮಾನದಂಡದ ಕುರಿತು ಅಮಿತ್ ಶಾ ಅವರು ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಬಂದ ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಹಿರಿಯ ನಾಯಕರಾದ ಅಮಿತ್ ಶಾ ಅವರ ಮಾರ್ಗದರ್ಶನದಂತೆ ರೋಡ್ ಮ್ಯಾಪ್ ಸಿದ್ಧಪಡಿಸಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ನಮ್ಮ ಪಕ್ಷಕ್ಕೆ ಶಕ್ತಿ ಇರುವವರು, ಸಮಾಜದ ಬಗ್ಗೆ ಕಳಕಳಿ ಇರುವವರು ಎಲ್ಲೆಲ್ಲಿಂದ- ಯಾರ್ಯಾರು ಬರುತ್ತಾರೋ ಅವರನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದ ಅವರು, ಪ್ರಸ್ತುತ ರಾಜಕೀಯದ ಚರ್ಚೆ ನಡೆದಿದೆ. ವಿಶ್ವಾಸದ ವಾತಾವರಣದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣ ಉಂಟಾಗಿದೆ. ಕಾಂಗ್ರೆಸ್‍ನವರು ಕಂಗಾಲಾಗಿದ್ದಾರೆ. ಬಿಜೆಪಿ 150 ಸ್ಥಾನ ಗೆಲ್ಲಲು ಅಗತ್ಯವಾದ ಗ್ರೌಂಡ್‍ವರ್ಕ್ ಮತ್ತು ರೋಡ್ ಮ್ಯಾಪ್ ಅನ್ನು ತಯಾರಿಸಲಿದ್ದೇವೆ ಎಂದರು.
ಪಕ್ಷ ಸೇರುವ ಬೇರೆ ಪಕ್ಷದವರ ಬಗ್ಗೆ ರಾಜ್ಯಾಧ್ಯಕ್ಷರು ಒಂದು ಸಮಿತಿ ರಚಿಸಿ ನಿರ್ಧರಿಸಲಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷದ ಹತಾಶ ವ್ಯಕ್ತಿಗಳು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಆ ಕುರಿತು ಪರಿಶೀಲಿಸಲಾಗುತ್ತದೆ ಎಂದು ನುಡಿದ ಅವರು, ಅವಧಿಪೂರ್ವ ಚುನಾವಣೆ ಕುರಿತು ಚರ್ಚಿಸಿಲ್ಲ, 2023ರ ಏಪ್ರಿಲ್‍ನಲ್ಲಿ ಚುನಾವಣೆ ನಡೆಯಲಿದೆ ಎಂದೂ ತಿಳಿಸಿದರು.