ಬೆಂಗಳೂರು: ಮುಖ್ಯಮಂತ್ರಿ ಬದಲಾಗಿದ್ದೇ ತಡ ಅನೇಕರು ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದಾರೆ. ಹಲವರು ಲಾಭಿ ನಡೆಸಿದರೂ ಸಂಪುಟ ಸೇರಲು ಸಾಧ್ಯವಾಗಿಲ್ಲ. ಈ ಅಸನಾಧಾನದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೆಲವು ನಾಯಕರ ಬಗ್ಗೆ ಹೈಕಮಾಂಡ್ ಗರಂ ಆಗಿದೆ.
ಇದೇ ವೇಳೆ, ಎಲ್ಲರಿಗೂ ರಾಜಕೀಯ ಸ್ಥಾನಮಾನ, ಸಚಿವ ಸ್ಥಾನ ಬೇಕೆಂಬ ಬಯಕೆ ಇರುವುದು ಸಹಜ. ಆದರೆ, ಆ ಎಲ್ಲ ಪ್ರಯತ್ನಗಳನ್ನು ಬಹಿರಂಗವಾಗಿ ಮಾಡದೇ ನಾಲ್ಕು ಗೋಡೆಗಳ ಮಧ್ಯೆ ಕೂತು ಪಕ್ಷದ ಚೌಕಟ್ಟಿನಲ್ಲಿ ನಡೆಸಬೇಕು. ಮಾಧ್ಯಮಗಳ ಮುಂದೆ ಹೋಗಿ ರಂಪ ಮಾಡುವುದು ಒಳ್ಳೆಯದಲ್ಲ ಎಂದು ಸಚಿವ ಡಾ.ಅಶ್ವತ್ಥನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ. ಅದಕ್ಕೊಂದು ನೀತಿ-ಸಿದ್ಧಾಂತ ಇದೆ. ಅದನ್ನು ಎಲ್ಲರೂ ಗೌರವಿಸಬೇಕು ಎಂದ ಅವರು, ಮನೆ ವಿಷಯವನ್ನು ಯಾವ ಕಾರಣಕ್ಕೂ ಬೀದಿಗೊಯ್ಯುವುದು ಸಲ್ಲ ಎಂದರು.