ಬೆಂಗಳೂರು: ತೀವ್ರ ಕುತೂಹಲ ಕೆರಳಿಸುವ ಬಿಟ್‌ಕಾಯಿನ್ ಕರ್ಮಕಾಂಡ, ಅಕೌಂಟ್ ಹ್ಯಾಕಿಂಗ್ ಪ್ರಕರಣದ ತನಿಖೆಯ ಹೊಣೆ ಸಿಬಿಐ ಹಾಗೂ ಇಡಿ ಹೆಗಲೇರಿದೆ. ಈ ಕುರಿತಂತೆ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಯೊಂದನ್ನು ನೀಡಿ ವಿದ್ಯಮಾನಗಳಿಗೆ ತಿರುವು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿ ಬಿಟ್ ಕಾಯಿನ್ ದಂದೆ ನಡೆದಿದೆ ಎಂಬ ಬಗ್ಗೆ ಆರೋಪ ಕೇಳಿಬಂದಿದ್ದು ಈ ಬಗ್ಗೆ ಸಿಬಿಐ ತನಿಖೆಗೆ ಸರ್ಕಾರ ಶಿಫಾರಸು ಮಾಡಿದೆ ಎಂದು ತಿಳಿಸಿದರು. ಬಿಟ್ ಕಾಯಿನ್ ಆರೋಪಿಗಳಿಗೆ ಇಬ್ಬರು ರಾಜಕಾರಣಿಗಳು ನೆರಳಾಗಿದ್ದಾರೆ ಎಂಬ ಬಗ್ಗೆ ಅವರು ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ.
ತನಿಖೆಯುಲ್ಲಿ ಯಾರು ಹಸ್ತಕ್ಷೇಪ ಮಾಡುವುದು, ಭಾಗವಹಿಸುವುದಕ್ಕೆ ಅವಕಾಶ ಇಲ್ಲ ಎಂದವರು ತಿಳಿಸಿದರು.
ಏನಿದು ಆರೋಪ..?
ರಾಜಧಾನಿ ಬೆಂಗಳೂರು ಪೊಲೀಸರು ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿದ್ದಾಗಲೇ ಬಿಟ್ ಕಾಯಿನ್ ಅಕ್ರಮದ ಬಗ್ಗೆ ವಾಸನೆ ಬಡಿದಿದೆ. ಪೊಲೀಸರು ಈ ಕೇಸ್‌ನತ್ತ ಚಿತ್ತ ಹರಿಸಿದ್ದು ಆ ಸಂದರ್ಭದಲ್ಲಿ ಆರೋಪಿಗಳನ್ನು ರಕ್ಷಿಸಲು ಪ್ರಭಾವಿಗಳು ಹಾಗೂ ರಾಜಕಾರಣಿಗಳಿಗೆ ಹಣ ಸಂದಾಯವಾಗಿದೆ ಎಂಬ ಸಂಗತಿ ಚರ್ಚೆಗೆ ಬಂದಿದೆ. ತನಿಖೆ ಸಿಬಿಐಗೆ ವರ್ಗಾವಣೆಯಾದರೆ ಹಲವು ಅಧಿಕಾರಿಗಳು, ರಾಜಕಾರಣಿಗಳ ಬಂಧನ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂಬ ಮಾತುಗಳೂ ಕೇಳಿಬಂದಿದೆ.
ಡ್ರಗ್ ಮಾಫಿಯಾ, ಬಿಟ್ ಕಾಯಿನ್ ದಂಧೆ, ಅಕೌಂಟ್ ಹ್ಯಾಕಿಂಗ್ ಮೂಲಕ ಬಹುಕೋಟಿ ಅಕ್ರಮ ನಡೆದಿರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರೆ, ಇನ್ನೊಂದೆಡೆ ರಾಜಕೀಯ ನಾಯಕರಿಂದಲೇ ಆರೋಪಿಗಳಿಗೆ ಶ್ರೀರಕ್ಷೆ ಸಿಕ್ಕಿದೆ ಎಂಬ ಆರೋಪ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ಮಾಧ್ಯಮದ ವರದಿ ಆಧರಿಸಿ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ.
ಸಾಮಾಜಿಕ ಹಿತಾಸಕ್ತಿಗಾಗಿ ಹೋರಾಡುತ್ತಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ನ ಮುಖ್ಯಸ್ಥ ಕೆ.ಎ.ಪಾಲ್ ಅವರು ಈ ಬಿಟ್ ಕಾಯಿನ್ ಅಕ್ರಮ, ಡ್ರಗ್ಸ್ ಹಾವಳಿ ಹಾಗೂ ಅಕೌಂಟ್ಸ್ ಹ್ಯಾಕ್ ಆರೋಪ ಕುರಿತ ರಹಸ್ಯ ಮಾಹಿತಿಯನ್ನು ಪ್ರಧಾನಿ ಜೊತೆ ಹಂಚಿಕೊಂಡಿದ್ದಾರೆ. ಈ ಹಿಂದೆ ಕೆಲವು ಪ್ರಕರಣಗಳ ಬಗ್ಗೆ ಪ್ರಧಾನಿಯವರಿಗೆ ಇದೇ ಕೆ.ಎ.ಪಾಲ್ ದೂರು ನೀಡಿದ್ದರಿಂದ ರಾಜಕೀಯ ವಲಯದಲ್ಲಿ ತಳಮಳ ಸೃಷ್ಟಿಸಿತ್ತಲ್ಲದೆ, ಸರ್ಕಾರದ ಮಟ್ಟದಲ್ಲೂ ಭಾರೀ ಬದಲಾವಣೆಗಳಾಗಿತ್ತು. ಇದೀಗ ಈ ಹ್ಯಾಕಿಂಗ್ ಕರ್ಮಕಾಂಡದ ಬಗ್ಗೆಯೂ ಕೂಡ ಉನ್ನತ ಮಟ್ಟದ ತನಿಖೆ ಸಂಬಂಧ ಈ ಹೋರಾಟಗಾರ ಪ್ರಧಾನಿ ಜೊತೆ ಮಾಹಿತಿ ಹಂಚಿಕೊಂಡಿರುವ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.
ಡ್ರಗ್ ಪೆಡ್ಲಿಂಗ್, ಅಕೌಂಟ್ ಹ್ಯಾಕಿಂಗ್, ಮನಿ ಲಾಂಡರಿಂಗ್ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದ ಸಂದರ್ಭದಲ್ಲಿ ಹ್ಯಾಕರ್ ಎನ್ನಲಾದ ಶ್ರೀಕಿ ಎಂಬಾತನ ಕೃತ್ಯಗಳ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ಜಾಲಾಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದರು. ಈ ಪ್ರಕರಣಗಳು ತನಿಖೆ ಹಾಗೂ ವಿಚಾರಣಾ ಹಂತದಲ್ಲಿರುವಾಗಲೇ ಪ್ರಧಾನಿ ಕಚೇರಿಯಲ್ಲಿ ಒಂದು ದೂರಿನ ಆಧಾರದಲ್ಲಿ ವಿದ್ಯಮಾನಗಳು ಗರಿಗೆದರಿವೆ. ಈ ಪ್ರಕರಣಗಳಲ್ಲಿ ‘ಪ್ರಮುಖ ನಾಯಕರಿಬ್ಬರು ಕೃತ್ಯಕ್ಕೆ ನೆರಳಾಗಿದ್ದರು’ ಎಂದು ಕೆ.ಪಾಲ್ ಅವರು ಬೊಟ್ಟು ಮಾಡಿರುವುದೇ ಈ ಒಟ್ಟಾರೆ ಪ್ರಕರಣದ ಬಗ್ಗೆ ಇರುವ ಕುತೂಹಲ.
ಈ ಹ್ಯಾಕರ್ ಬಗ್ಗೆ ಹಾಗೂ ಹ್ಯಾಕಿಂಗ್ ವ್ಯೂಹದ ಬಗ್ಗೆ ತನಿಖೆ ನಡೆಯಬೇಕೆಂಬುದು ಸಾಮಾಜಿಕ ಹೋರಾಟಗಾರ ಕೆ.ಎ.ಪಾಲ್ ಅವರ ಆಗ್ರಹ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಉಳಿಯಬೇಕಾದರೆ ಈ ಪ್ರಕರಣದ ಕುರಿತು ಸಿಬಿಐ, ಇಡಿ, ಡಿಆರ್‌ಐ ಹಾಗೂ ಎನ್ಐಎ ಮೂಲಕ ತನಿಖೆ ನಡೆಸಬೇಕೆಂಬ ಅಭಿಪ್ರಾಯವನ್ನು ಕೆ.ಎ.ಪಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಮುಂದಿಟ್ಟಿದ್ದಾರೆ. ಅದರಲ್ಲೂ ಅಮೇರಿಕಾದ ಉನ್ನತ ತನಿಖಾ ಸಂಸ್ಥೆಯಾಗಿರುವ ಫೆಡರಲ್ ಬ್ಯೂರೋ ಇನ್ವೆಸ್ಟಿಗೇಶನ್ (ಎಫ್‌ಬಿ.ಐ) ಸಾಂಗತ್ಯದ ಔಚಿತ್ಯದ ಬಗೆಗಿನ ಉಲ್ಲೇಖವು ಅಂತಾರಾಷ್ಟ್ರೀಯ ಪ್ರಾಮುಖ್ಯತೆಗೆ ಕಾರಣವಾಗಿದೆ.
ಪ್ರಮುಖರ ಹುದ್ದೆಗಳಿಗೆ ಕುತ್ತು..?
ಶ್ರೀಕಿ ಪ್ರಕರಣವು ಡ್ರಗ್ ಕೇಸ್ ವಿಚಾರದಿಂದಾಗಿ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಆದರೆ ಇದೀಗ ಕೆ.ಎ.ಪಾಲ್ ಅವರ ಪತ್ರದ ನಂತರ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕಿಂಗ್ ಜಾಲದ ಪ್ರಕರಣದತ್ತ ಎಲ್ಲರ ಚಿತ್ತ ನೆಟ್ಟುವಂತಾಗಿದೆ. ಅದರಲ್ಲೂ ‘ಕೃತ್ಯಕ್ಜೆ ನಾಯಕರಿಬ್ಬರ ನೆರಳು’ ಇದೆ ಎಂಬ ಪದ ಬಳಕೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರಕರಣದ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದು, ಹಲವು ಖಡಕ್ ಅಧಿಕಾರಿಗಳ ಮಾರ್ಗದರ್ಶನದಲ್ಲೇ ತನಿಖೆ ಸಾಗಿತ್ತು. ಆದರೆ ಕೃತ್ಯ ನಡೆದದ್ದೆಲ್ಲಿ, ನಡೆದಿದ್ದಾದರೂ ಯಾವ ರೀತಿ, ಅದಕ್ಕೆ ನೆರಳಾದವರು ಯಾರು ಎಂಬುದೇ ಕುತೂಹಲದ ಸಂಗತಿ.
ಇದೇ ವೇಳೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಕರಣ ಗಮನ ಕೇಂದ್ರೀಕರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಪ್ರಕರಣದ ಬಗ್ಗೆ ಸಮರ್ಪಕ ತನಿಖೆಗೆ ಒಲವು ಹೊಂದಿದ್ದಾರೆನ್ನಲಾಗಿದೆ.