ದೆಹಲಿ: ಕೆಲವು ತಿಂಗಳ ಹಿಂದೆ ಜಿಂದಾಲ್ ಭೂ ಚಕ್ರ ಯಡಿಯೂರಪ್ಪ ಸರ್ಕಾರದ ಅಧಿಪತ್ಯವನ್ನು ಕೊನೆಗಾಣಿಸಿದರೆ, ಇದೀಗ ಅಕೌಂಟ್ ಹ್ಯಾಕಿಂಗ್ ಕರ್ಮಕಾಂಡ ಬೊಮ್ಮಾಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಕುರಿತು ಹೈ ವೋಲ್ಟೇಜ್ ಡೆವಲಪ್ಮೆಂಟ್ಗೆ ಪ್ರಧಾನಿ ಕಚೇರಿಯೇ ಸಾಕ್ಷಿಯಾಗುತ್ತಿದೆ.
ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಅಕ್ರಮ ಹಾಗೂ ಅಕೌಂಟ್ ಹ್ಯಾಕಿಂಗ್ ದಂಧೆಯ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.
ರಾಜಧಾನಿ ಬೆಂಗಳೂರು ಪೊಲೀಸರು ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿದ್ದಾಗಲೇ ಬಿಟ್ ಕಾಯಿನ್ ಅಕ್ರಮದ ಬಗ್ಗೆ ವಾಸನೆ ಬಡಿದಿದೆ. ಪೊಲೀಸರು ಈ ಕೇಸ್ನತ್ತ ಚಿತ್ತ ಹರಿಸಿದ್ದು ಆ ಸಂದರ್ಭದಲ್ಲಿ ಆರೋಪಿಗಳನ್ನು ರಕ್ಷಿಸಲು ಪ್ರಭಾವಿ ರಾಜಕಾರಣಿಗಳಿಗೆ ಹಣ ಸಂದಾಯವಾಗಿದೆ ಎಂಬ ಸಂಗತಿ ಚರ್ಚೆಗೆ ಬಂದಿದೆ.
ಡ್ರಗ್ ಮಾಫಿಯಾ, ಬಿಟ್ ಕಾಯಿನ್ ದಂಧೆ, ಅಕೌಂಟ್ ಹ್ಯಾಕಿಂಗ್ ಮೂಲಕ ಬಹುಕೋಟಿ ಅಕ್ರಮ ನಡೆದಿರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರೆ, ಇನ್ನೊಂದೆಡೆ ರಾಜಕೀಯ ನಾಯಕರಿಂದಲೇ ಆರೋಪಿಗಳಿಗೆ ಶ್ರೀರಕ್ಷೆ ಸಿಕ್ಕಿದೆ ಎಂಬ ಆರೋಪ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ಮಾಧ್ಯಮದ ವರದಿ ಆಧರಿಸಿ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ.
ಡ್ರಗ್ ಪೆಡ್ಲಿಂಗ್, ಅಕೌಂಟ್ ಹ್ಯಾಕಿಂಗ್, ಮನಿ ಲಾಂಡರಿಂಗ್ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದ ಸಂದರ್ಭದಲ್ಲಿ ಹ್ಯಾಕರ್ ಎನ್ನಲಾದ ಶ್ರೀಕಿ ಎಂಬಾತನ ಕೃತ್ಯಗಳ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ಜಾಲಾಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದರು. ಈ ಪ್ರಕರಣಗಳು ತನಿಖೆ ಹಾಗೂ ವಿಚಾರಣಾ ಹಂತದಲ್ಲಿರುವಾಗಲೇ ಪ್ರಧಾನಿ ಕಚೇರಿಯಲ್ಲಿ ಒಂದು ದೂರಿನ ಆಧಾರದಲ್ಲಿ ವಿದ್ಯಮಾನಗಳು ಗರಿಗೆದರಿವೆ. ಈ ಪ್ರಕರಣಗಳಲ್ಲಿ ‘ಪ್ರಮುಖ ನಾಯಕರಿಬ್ಬರು ಕೃತ್ಯಕ್ಕೆ ನೆರಳಾಗಿದ್ದರು’ ಎಂದು ಕೆ.ಪಾಲ್ ಅವರು ಬೊಟ್ಟು ಮಾಡಿರುವುದೇ ಈ ಒಟ್ಟಾರೆ ಪ್ರಕರಣದ ಬಗ್ಗೆ ಇರುವ ಕುತೂಹಲ.
ಈ ಹ್ಯಾಕರ್ ಬಗ್ಗೆ ಹಾಗೂ ಹ್ಯಾಕಿಂಗ್ ವ್ಯೂಹದ ಬಗ್ಗೆ ತನಿಖೆ ನಡೆಯಬೇಕೆಂಬುದು ಸಾಮಾಜಿಕ ಹೋರಾಟಗಾರ ಕೆ.ಎ.ಪಾಲ್ ಅವರ ಆಗ್ರಹ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಉಳಿಯಬೇಕಾದರೆ ಈ ಪ್ರಕರಣದ ಕುರಿತು ಸಿಬಿಐ, ಇಡಿ, ಡಿಆರ್ಐ ಹಾಗೂ ಎನ್ಐಎ ಮೂಲಕ ತನಿಖೆ ನಡೆಸಬೇಕೆಂಬ ಅಭಿಪ್ರಾಯವನ್ನು ಕೆ.ಎ.ಪಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಮುಂದಿಟ್ಟಿದ್ದಾರೆ. ಅದರಲ್ಲೂ ಅಮೇರಿಕಾದ ಉನ್ನತ ತನಿಖಾ ಸಂಸ್ಥೆಯಾಗಿರುವ ಫೆಡರಲ್ ಬ್ಯೂರೋ ಇನ್ವೆಸ್ಟಿಗೇಶನ್ (ಎಫ್ಬಿ.ಐ) ಸಾಂಗತ್ಯದ ಔಚಿತ್ಯದ ಬಗೆಗಿನ ಉಲ್ಲೇಖವು ಅಂತಾರಾಷ್ಟ್ರೀಯ ಪ್ರಾಮುಖ್ಯತೆಗೆ ಕಾರಣವಾಗಿದೆ.
ಪ್ರಮುಖರ ಹುದ್ದೆಗಳಿಗೆ ಕುತ್ತು..?
ಶ್ರೀಕಿ ಪ್ರಕರಣವು ಡ್ರಗ್ ಕೇಸ್ ವಿಚಾರದಿಂದಾಗಿ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಆದರೆ ಇದೀಗ ಕೆ.ಎ.ಪಾಲ್ ಅವರ ಪತ್ರದ ನಂತರ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕಿಂಗ್ ಜಾಲದ ಪ್ರಕರಣದತ್ತ ಎಲ್ಲರ ಚಿತ್ತ ನೆಟ್ಟುವಂತಾಗಿದೆ. ಅದರಲ್ಲೂ ‘ಕೃತ್ಯಕ್ಜೆ ನಾಯಕರಿಬ್ಬರ ನೆರಳು’ ಇದೆ ಎಂಬ ಪದ ಬಳಕೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರಕರಣದ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದು, ಹಲವು ಖಡಕ್ ಅಧಿಕಾರಿಗಳ ಮಾರ್ಗದರ್ಶನದಲ್ಲೇ ತನಿಖೆ ಸಾಗಿತ್ತು. ಆದರೆ ಕೃತ್ಯ ನಡೆದದ್ದೆಲ್ಲಿ, ನಡೆದಿದ್ದಾದರೂ ಯಾವ ರೀತಿ, ಅದಕ್ಕೆ ನೆರಳಾದವರು ಯಾರು ಎಂಬುದೇ ಕುತೂಹಲದ ಸಂಗತಿ.
ಈ ನಡುವೆ, ಈ ಪ್ರಕರಣ ಪ್ರಧಾನಿ ಅಂಗಳ ತಲುಪಿರುವುದರಿಂದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಾವ ನಡೆ ಅನುಸರಿಸುತ್ತಾರೆ, ಹಾಗೂ ಆಡಳಿತ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿರುವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಯಾವ ದಾರಿ ಹುಡುಕಾಡುತ್ತಾರೆ ಎಂಬುದೇ ಕೌತುಕದ ಸಂಗತಿ.