ಮೈಸೂರು: ಬಿಟ್ ಕಾಯಿನ್ ಕರ್ಮಕಾಂಡ ರಾಜ್ಯ ರಾಜಕಾರಣದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸುವ ಆತಂಕ ಎದುರಾಗುವಂತೆ ಮಾಡಿದೆ. ಈ ಕುರಿತಂತೆ ಸಿಟಿಜನ್ ರೈಟ್ಸ್ ಫೌಂಡೇಷನ್ ಪ್ರಮುಖರು ಪ್ರಧಾನಿ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಉನ್ನತ ಮಟ್ಟದ ತನಿಖೆಗೆ ಕೋರಿದ್ದರು. ಈ ಕುರಿತಂತೆ ಸಿಬಿಐ ತನಿಖೆ ಆರಂಭಗೊಂಡಿರುವಂತೆಯೇ ಪ್ರತಿಪಕ್ಷ ಕಾಂಗ್ರೆಸ್ ಕೂಡಾ ಬಿಟ್ ಕಾಯಿನ್ ಪ್ರಕರಣವನ್ನು ತಾರ್ಕಿಕ ಘಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದೆ.
ಈ ನಡುವೆ ಮೈಸೂರಿನಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ನೀಡಿರುವ ಸುಳಿವು ರಾಜ್ಯ ಸರ್ಕಾರಕ್ಕೆ ಸವಾಲು ಎಂಬಂತಿದೆ. ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕುಗೊಂಡರೆ ರಾಜ್ಯಕ್ಕೆ ಬಿಜೆಪಿಯಿಂದ ಮೂರನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಚಾರ್ಜ್ ಆದಮೇಲೆ ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ ಎಂದರು. ಈ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ ಮೂರನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದರು.
ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಪದವನ್ನು ಪುನರುಚ್ಛರಿಸುತ್ತಿದ್ದ ವೈಖರಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆಯವರ ಮಾತುಗಳು ಸಿಎಂ ಸುತ್ತ ಗಿರಕಿ ಹೊಡೆಯುತ್ತಿದ್ದುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.