ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಸರ್ವರ ಅಭಿವೃದ್ಧಿಯನ್ನು ಒಳಗೊಂಡಿದೆ. ಸರ್ವರಿಗೂ ಸಮಪಾಲು ಸಮಬಾಳು, ಬಡವರ ಕಲ್ಯಾಣ, ಸಾಮಾಜಿಕ ನ್ಯಾಯ, ಸಾಮಾಜಿಕ ಸಮಾನತೆಯ ಆಯವ್ಯಯ ಮಂಡಿಸಿದ್ದು, ಸರ್ಕಾರ ಬಡವರ ಪರ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಬಿಲ್ಲವ ಸಮುದಾಯದ ಮುಖಂಡರೂ ಆದ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್ ಪದ್ಮರಾಜ್ ಬಣ್ಣಿಸಿದ್ದಾರೆ.
ಸಿದ್ದರಾಮಯ್ಯ ಅವರ ಬಜೆಟನ್ನು ಸ್ವಾಗತಿಸಿರುವ ಅವರು, 5 ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ಅನುದಾನ, ಇಂದಿರಾ ಕ್ಯಾಂಟಿನ್ಗೆ 100 ಕೋಟಿ ರೂಪಾಯಿ ಅನುದಾನ, ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು 3ರಿಂದ 5 ಲಕ್ಷ ರೂಪಾಯಿಗೆ ಏರಿಕೆ, ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರ ಕೋಟಿ ರೂಪಾಯಿ ಅನುದಾನ, ಜಾನುವಾರುಗಳು ಆಕಸ್ಮಿಕವಾಗಿ ಸತ್ತರೆ ಅನುಗ್ರಹ ಯೋಜನೆ ಮರು ಜಾರಿಗೊಳಿಸುವ ಮೂಲಕ 10 ಸಾವಿರ ರೂಪಾಯಿ ಪರಿಹಾರ, ರಸ್ತೆ, ಕಾಲುವೆ ದುರಸ್ತಿ ಸೇರಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ರೈತರ ಆದಾಯ ಹೆಚ್ಚಿಸಲು ಯೋಜನೆ, ಮೀನುಗಾರ ಮಹಿಳೆಯರ ಸಾಲ ಮಿತಿ 3 ಲಕ್ಷ ರೂಪಾಯಿ ಹೆಚ್ಚಳ, ಮೀನುಗಾರಿಕಾ ಬೋಟ್ ಡೀಸೆಲ್ ಮಿತಿ ಹೆಚ್ಚಳ, ದೇಶದಲ್ಲೇ ಮೊದಲ ಅಂಗಾಂಗ ಜೋಡನೆ ಆಸ್ಪತ್ರೆ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 550 ಕೋಟಿ ರೂಪಾಯಿ ಮೀಸಲು, ಬಿಜೆಪಿ ಸರ್ಕಾರ ಅವಧಿಯಲ್ಲಿ ಪರಿಷ್ಕೃತ ಪಠ್ಯ ಪರಿಷ್ಕರಣೆ, ಶಾಲಾ ಕಾಲೇಜುಗಳಲ್ಲಿ ಹೊಸ ಶೌಚಗೃಹ ನಿರ್ಮಾಣಕ್ಕೆ 200 ಕೋಟಿ ರೂಪಾಯಿ, ಮಕ್ಕಳ ಪೌಷ್ಟಿಕಾಂಶ ಹೆಚ್ಚಳಕ್ಕೆ 1-10ನೇ ತರಗತಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ, ಜಿಲ್ಲಾ-ತಾಲೂಕು ಆಸ್ಪತ್ರೆಗಳಲ್ಲಿ 219 ಡಯಾಲಿಸಿಸ್ ಸೆಂಟರ್ ಸ್ಥಾಪಿಸಲು 92 ಕೋಟಿ ರೂಪಾಯಿ, ಆರೋಗ್ಯ ಇಲಾಖೆಗೆ 14 ಸಾವಿರ ಕೋಟಿ ರೂಪಾಯಿ, ಕಲಿಕಾ ಬಲವರ್ಧನೆಗೆ ಯೋಜನೆ, ಪರಿಸರ ಸಂರಕ್ಷಣೆಗೆ ಆದ್ಯತೆ, ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ, ಎಂಆರ್ಐ ಸ್ಕ್ಯಾನಿಂಗ್ ವ್ಯವಸ್ಥೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅರಿವು ಯೋಜನೆ ಮರು ಜಾರಿ ಹೀಗೆ ಹತ್ತು ಹಲವು ಜನಪರ ಯೋಜನೆಗಳನ್ನು ಘೋಷಿಸುವ ಮೂಲಕ ಎಲ್ಲರ ಅಭಿವೃದ್ಧಿಯೂ ಈ ಯೋಜನೆಗಳಿಂದ ಗ್ಯಾರಂಟಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಪದ್ಮರಾಜ್ ವಿಶ್ಲೇಷಿಸಿದ್ದಾರೆ.
ಮಹಿಳೆಯರು, ಹಿಂದುಳಿದ ವರ್ಗ, ದೀನ, ದಲಿತರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳ ಸ್ಥಾಪನೆಗೆ ಅವಕಾಶ ನೀಡಿರುವುದು ಶ್ಲಾಘನೀಯ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ, ಯುವಕರು ಹೃದಯಾಘಾತದಿಂದ ಸಾವನ್ನಪ್ಪುವುದನ್ನು ಪತ್ತೆಹಚ್ಚಲು ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಈ ಹಿಂದೆ ಒತ್ತಾಯಿಸುತ್ತಲ್ಲೇ ಬಂದಿದ್ದೆವು. ಅದಕ್ಕೆ ಪೂರಕ ಎಂಬಂತೆ ಪುನಿತ್ರಾಜ್ಕುಮಾರ್ ಸ್ಮರಣಾರ್ಥ ಆಸ್ಪತ್ರೆಗಳಲ್ಲಿ ಎಇಡಿ ಯಂತ್ರದ ಸ್ಥಾಪನೆ ಮಾಡಿ ಹೃದಯಾಘಾತ ಪತ್ತೆ ಹಚ್ಚಲು ಸರ್ಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದಿರುವ ಪದ್ಮರಾಜ್, ಸಮಾಜ ಕಲ್ಯಾಣ ಹಾಗು ಪರಿಶಿಷ್ಟ ವರ್ಗಗಳ ಇಲಾಖೆಯ ಅಭಿವೃದ್ಧಿ ನಿಗಮಗಳ ಕಲ್ಯಾಣಕ್ಕಾಗಿ ಅನುದಾನ, ಗೋಶಾಲೆಗಳ ಗೋವುಗಳ ದತ್ತು ಸ್ವೀಕಾರಕ್ಕಾಗಿ ಪುಣ್ಯಕೋಟಿ ದತ್ತು ಯೋಜನೆ ಈಗೆ ಹತ್ತು ಹಲವು ಕಲ್ಯಾಣ ಯೋಜನೆಗಳನ್ನು ಮಂಡಿಸುವ ಮೂಲಕ ಸರ್ವರ ಹಿತ ಕಾಯುವ ಆಯವ್ಯಯ ಮಂಡಿಸಿದ್ದಾರೆ. ಎಲ್ಲ ವರ್ಗದ ಜನರಿಗೂ ಅನುದಾನ ಮೀಸಲಿಡುವ ಮೂಲಕ ಸರ್ವರ ಹಿತ ಕಾಪಾಡುವ ಪ್ರಯತ್ನ ಕಾಣಬಹುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಸಮ ಸಮಾಜದ ಆಶಯ ಇರುವ ಸಾಮಾಜಿಕ ನ್ಯಾಯದ ಈ ಬಜೆಟ್ ದೇಶಾದ್ಯಂತ ಹಣ ದುಬ್ಬರ ಮತ್ತು ಬೆಲೆ ಏರಿಕೆಯ ಸಂಧರ್ಭದಲ್ಲಿ ನಮ್ಮ ರಾಜ್ಯ ಕ್ಕೆ ಆಶಾದಾಯಕವಾಗಿದೆ. ಆದರೆ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ವರ್ಷಕ್ಕೆ 250 ಕೋಟಿ ರೂಪಾಯಿ ಮೀಸಡಲಿಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಆದರೆ ಈ ಬಜೆಟ್ನಲ್ಲಿ ಯಾವುದೇ ಪ್ರಸ್ತಾಪ ಮಾಡದಿರುವುದು ಸ್ವಲ್ಪ ನಿರಾಶೆ ತಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಫ್ಲಿಮೆಂಟರಿ ಬಜೆಟ್ನಲ್ಲಿ ಅನುಷ್ಠಾನಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.