ತುಳು ಮನರಂಜನಾ ಇತಿಹಾಸದಲ್ಲಿ ಹೊಸತನದ ಪರ್ವಕ್ಕೆ ‘ಭೋಜರಾಜ್..’ ಸಿನಿಮಾ ಮುನ್ನುಡಿ ಬರೆದಿದೆ. ಅಂದೊಂದು ಕಾಲವಿತ್ತು. ದಶಕಗಳ ಹಿಂದೆ ‘ಬದ್‌ಕೆರೆ ಬುಡ್ಲೆ’, ‘ಬಂಗಾರ್ ಪಟ್ಲೇರ್’ ಸಹಿತ ಹಲವು ತುಳು ಸಿನಿಮಾಗಳು ಗಲ್ಲಾಪೆಟ್ಟಿಗೆಯನ್ನು ಚಿಂದಿ ಉಡಾಯಿಸಿದ್ದವು. ಅನಂತರದ ದಶಕದಲ್ಲಿ ತುಳು ಸಿನಿಮಾಗಳು ಅಷ್ಟೇನು ಜೈಕಾರ ಗಿಟ್ಟಿಸಿಕೊಂಡಿಲ್ಲ. ಇದೀಗ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಮಾಡಿದ ಚಮತ್ಕಾರ ಕೋಸ್ಟಲ್‌ವುಡ್‌ನಲ್ಲಿ ಜೈಕಾರಕ್ಕೆ ಸಾಕ್ಷಿಯಾಗಿದೆ. ಇಸ್ಮಾಯಿಲ್ ನಿರ್ದೇಶನದ ‘ಭೋಜರಾಜ್ MBBS’ ತುಳು ಚಿತ್ರ ಕನ್ನಡ-ಹಿಂದಿ ಸಿನಿಮಾಗಳ ಮಧ್ಯೆಯೂ ಮೇನಿಯಾ ಸೃಷ್ಟಿಸಿದೆ.
ಸಿನಿಮಾ ಇಂಡಸ್ಟ್ರಿಗೆ ಕಳೆದೆರಡು ವರ್ಷಗಳಿಂದ ಕೊರೋನಾ ಪರಿಸ್ಥಿತಿ ಭಾರೀ ಹೊಡೆತವನ್ನೇ ನೀಡಿದೆ. ಅನೇಕ ಕನ್ನಡ ಸಿನಿಮಾಗಳು ಈ ಸಂಕಟ ಕಾಲದಲ್ಲಿ ತೆರೆಕಂಡು ನಷ್ಟಕ್ಕೊಳಗಾಗೊವೆ. ಈ ಕಠಿಣ ಪರಿಸ್ಥಿತಿ ಈಗಿನ್ನೂ ತಿಳಿಗೊಳ್ಳದಿದ್ದರೂ ‘ಭೋಜರಾಜ್..’ ತಂಡ ಯಶಸ್ಸಿನಿಂದ ಬೀಗುತ್ತಿದೆ.
ಅದಾಗಲೇ 25 ದಿನಗಳ ಯಶಸ್ವೀ ಪ್ರದರ್ಶನ ಕಂಡಿರುವ ‘ಭೋಜರಾಜ್ MBBS’ ಸಿನಿಮಾ ಕೋಸ್ಟಲ್‌ವುಡ್‌ನಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ. ಹಾಸ್ಯ ನಟರನ್ನೊಳಗೊಂಡ ತಂಡ ಈ ಸಿನಿಮಾದಲ್ಲಿ ಕಮಾಲ್ ಪ್ರದರ್ಶಿಸಿದೆ. ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್ ಸಹಿತ ದಿಗ್ಗಜರ ಅಭಿನಯ ಗಮನಸೆಳೆದಿದೆ. ವೈರುದ್ಯದ ಹಾದಿಯಲ್ಲಿದ್ದ ತುಳು ನಾಟಕ ರಙಗದ ದಿಗ್ಗಜರಾದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹಾಗೂ ದೇವದಾಸ್ ಕಾಪಿಕ್ಕಾಡ್ ಅವರು ಈ ಸಿನಿಮಾದಲ್ಲಿ ಸಮಾಗಮವಾಗಿರುವುದು ಮತ್ತೊಂದು ವಿಶೇಷ.
ಈ ನಡುವೆ, ‘ದಾನೆ ಪೊಣ್ಣೇ..’ ಎಂಬ ಹಳೇ ಹಿಟ್ ಸಾಂಗ್ ಈ ಸಿನಿಮಾದಲ್ಲಿ ಹೊಸ ರೂಪದಲ್ಲಿ ಜನರ ಮುಂದೆ ಬಂದಿದೆ. ಇಸ್ಮಾಯಿಲ್ ಮೂಡುಶೆಡ್ಡೆ ಅವರ ಈ ಪ್ರಯೋಗಕ್ಕೂ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.