ಬೆಳಗಾವಿ:ಗಡಿನಾಡು ಬೆಳಗಾವಿ ತುಂಬೆಲ್ಲಾ ಕೇಸರಿ ಕಲರವ. ಭಾರತೀಯ ಜನತಾ ಪಕ್ಷದ ಜನಸೇವಕ್ ಸಮಾವೇಶಕ್ಕೆ ಹರಿದು ಬಂದ ಜನಸಾಗರ. ಜನಸಾಗರ ಕಂಡು ಅಮಿತ್ ಷಾ ಹರ್ಷೋದ್ಗಾರ.ಬೆಳಗಾವಿಯಲ್ಲಿ ಸಮಾರೋಪಗೊಂಡ ಬಿಜೆಪಿಯ ಜನಸೇವಕ್ ಸಮಾವೇಶಕ್ಕೆ ಜನಸಾಗರವೇ ಹರಿದು ಬಂತು.
ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಭಾರತವು ಆತ್ಮನಿರ್ಭರ ದೇಶವಾಗಿ ಹೊರಹೊಮ್ಮಲು ದೇಶದೊಳಗಿನ ಉತ್ಪನ್ನಗಳನ್ನೇ ಬಳಸುವ ಸಂಕಲ್ಪ ನಮ್ಮದಾಗಬೇಕು ಎಂದು ಕರೆಕೊಟ್ಟರು.
ಪಕ್ಷದ ಚಿಹ್ನೆಯಾದ ಕಮಲ ಮತ್ತು ಬಿಜೆಪಿಗೆ ಇಲ್ಲಿನ ಜನರ ಋಣ ತೀರಿಸಲು ಅಸಾಧ್ಯ ಎಂದ ಅವರು, 370ನೇ ವಿಧಿ ರದ್ದತಿ ಮಾಡುವ ಮಹತ್ವದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಮಾಡಿದೆ. ಕಾಶ್ಮೀರ ಈಗ ಭಾರತದ ಅವಿಭಾಜ್ಯ ಅಂಗವಾಗಿದೆ. ಕಾಂಗ್ರೆಸ್ ಮತ್ತಿತರ ಪಕ್ಷಗಳ ವಿರೋಧದ ನಡುವೆಯೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವೂ ನಡೆದಿದೆ. ಶೀಘ್ರವೇ ಬೃಹತ್ ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ. ತ್ರಿವಳಿ ತಲಾಖ್ ರದ್ದತಿಯ ಪ್ರಮುಖ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಪಾಕಿಸ್ತಾನದ ಯೋಧರಿಂದ ನಮ್ಮ ಯೋಧರ ಶಿರಚ್ಛೇದ ಹಾಗೂ ದೇಶದೊಳಗೆ ಭ್ರಷ್ಟಾಚಾರ ನಿರಂತರವಾಗಿ ನಡೆಯುತ್ತಿತ್ತು. ಅಭಿವೃದ್ಧಿ ಶೂನ್ಯ ಸ್ಥಿತಿ ದೇಶದ್ದಾಗಿತ್ತು. ದೇಶದ ಸರಹದ್ದಿನೊಳಗೆ ನುಸುಳುವ ಅವಕಾಶ ಈಗ ಇಲ್ಲ. 60 ಕೋಟಿ ಬಡವರಿಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕೊಡಲಾಗಿದೆ. ಬಡವರ ಮನೆಗಳಿಗೂ ಸಿಲಿಂಡರ್ ಸಂಪರ್ಕ ಎಂಬ ಕನಸನ್ನೂ ನನಸು ಮಾಡಲಾಗಿದೆ. ವಿದ್ಯುತ್ ಇಲ್ಲದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ. ಬಡಜನರಿಗಾಗಿ 5 ಲಕ್ಷ ರೂಪಾಯಿ ಆರೋಗ್ಯ ವಿಮೆಯನ್ನೂ ಜಾರಿಗೊಳಿಸಲಾಗಿದೆ ಎಂದರು.
ಕಾಂಗ್ರೆಸ್ಸಿಗರು ಬಡವರ ಮನೆಗಳಿಗೆ ಗ್ಯಾಸ್, ವಿದ್ಯುತ್ ಸಂಪರ್ಕ, ಆಯುಷ್ಮಾನ್ ಯೋಜನೆ ಯಾಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದ ಅವರು ಮೋದಿ ಅವರ ಸರಕಾರ ಬಡವರ ಜೀವನ ಮಟ್ಟ ಸುಧಾರಿಸಿದೆ ಎಂದು ವಿವರಿಸಿದರು.
ಆರೂವರೆ ವರ್ಷಗಳಲ್ಲಿ ದೇಶ ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಮೋದಿ ಅವರ ನೇತೃತ್ವದಲ್ಲಿ ಅತ್ಯಂತ ಕಡಿಮೆ ಜನರಷ್ಟೇ ತೊಂದರೆಗೆ ಸಿಲುಕಿ, ದೇಶವು ಸಮಸ್ಯೆಯಿಂದ ಹೊರಬಂದಿದೆ ಎಂದರು.
ದೇಶ ಸುರಕ್ಷಿತವಾಗಿದೆ. ಕೊರೋನಾಮುಕ್ತರಾಗಲು ನಾವೆಲ್ಲರೂ ಲಸಿಕೆ ಪಡೆಯಬೇಕು ಎಂದ ಅವರು, ಕೊರೋನಾ ಕಾಲಘಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡ ಪರಿಹಾರ ಕ್ರಮಗಳನ್ನು ಶ್ಲಾಘಿಸಿದರು. ಬಡವರು, ತೊಂದರೆಗೆ ಸಿಲುಕಿದ ವರ್ಗದವರಿಗೆ ಹಣಕಾಸು- ಆಹಾರಧಾನ್ಯದ ನೆರವನ್ನು ನೀಡಿದ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳಿಗೆ ಮನದಾಳದ ಅಭಿನಂದನೆ ಸಲ್ಲಿಸುವುದಾಗಿ ಅಮಿತ್ ಷಾ ತಿಳಿಸಿದರು.
ಕಲಬುರ್ಗಿ, ಬೀದರ್ ವಿಮಾನನಿಲ್ದಾಣ ಆರಂಭ,
ಕೊಪ್ಪಳದಲ್ಲಿ ಆಟಿಕೆ ನಿರ್ಮಾಣದ ಕಾರ್ಖಾನೆ ಸ್ಥಾಪನೆಯಲ್ಲಿ ಪಕ್ಷದ ಪಾತ್ರ ಮಹತ್ವದ್ದು ಎಂದ ಅಮಿತ್ ಷಾ, ಹಿಂದಿನ ಮನಮೋಹನ್ ಸಿಂಗ್ ಅವರ ಸರಕಾರವು ಕರ್ನಾಟಕಕ್ಕೆ ಏನು ಕೊಡುಗೆ ನೀಡಿದೆ ಎಂಬ ಪಟ್ಟಿ ಮಾಡಿಕೊಡಿ ಎಂದು ಸವಾಲೆಸೆದರು. ಮೋದಿ ಮತ್ತು ಯಡಿಯೂರಪ್ಪ ಅವರ ನೇತೃತ್ವದ ಸರಕಾರಗಳು ಮಾತ್ರವೇ ರಾಜ್ಯವನ್ನು ವಿಕಾಸದೆಡೆಗೆ ಒಯ್ಯಬಲ್ಲದು ಎಂದು ವಿಶ್ವಾಸದಿಂದ ನುಡಿದರು. ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಅಭೂತಪೂರ್ವ ಗೆಲುವನ್ನು ಬಿಜೆಪಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.