ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಆಯ್ಕೆಯಾದ ನೂತನ ಗ್ರಾಮ ಪಂಚಾಯತ್ ಸದಸ್ಯರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಭಿನಂದಿಸಿ ಸತ್ಕರಿಸಿದರು.
ಬೆಳಗಾವಿಯ ಜಾಂಬೋಟಿ ರಸ್ತೆಯಲ್ಲಿರುವ ಗಣೇಶ್ ಭಾಗ್ ತೋಟದಲ್ಲಿ ನಡೆದ ಸ್ನೇಹಕೂಟದಲ್ಲಿ ನೂತನ ಗ್ರಾಮ ಪಂಚಾಯತ್ ಸದಸ್ಯರನ್ನು ಅಭಿನಂದಿಸಿ ರಮೇಶ್ ಜಾರಕಿಹೊಳಿ, ಗೋಕಾಕ್ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರಗಳೆರಡೂ ನನ್ನ ಎರಡು ಕಣ್ಣುಗಳಿದ್ದಂತೆ. ಮುಂದಿನ ಇನ್ನೆರಡು ವರ್ಷಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದ ಸಚಿವ ರಮೇಶ್ ಜಾರಕಿಹೊಳಿ, ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆಯುವತ್ತ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.