ಬೆಂಗಳೂರು: ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ)ತರಬೇತಿಯನ್ನು ನೀಡಲು ರಾಜ್ಯ ಸರ್ಕಾರ ಯೋಜಿಸಿದೆ.
ಆತ್ಮ ನಿರ್ಭರ್ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಕ್ರಮಬದ್ಧಗೊಳಿಸುವಿಕೆ ಯೋಜನೆಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿಎಫ್ ಟಿಆರ್ಐ (ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಸರ್ಕಾರ. ಆಫ್ ಇಂಡಿಯಾ, ಮೈಸೂರು) ಮೈಸೂರಿನಲ್ಲಿ ರೈತರಿಗೆ ತರಬೇತಿ ನೀಡುವ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್, ವಿಕಾಸಸೌಧದ ಕಚೇರಿಯಲ್ಲಿ ಸಿಎಫ್ ಟಿಆರ್ಐ ಮುಖ್ಯಸ್ಥರು ಹಾಗೂ ವಿಜ್ಞಾನಿಗಳೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಿದರು.
ಜನವರಿ 11 ರಿಂದ ಮಾರ್ಚ್ 30 ರವರೆಗೆ ತರಬೇತಿ ನಡೆಸಲು ಉದ್ದೇಶಿಸಲಾಗಿದ್ದು, ಕೃಷಿ ಇಲಾಖೆಯ ಕೆಪೆಕ್ (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ) 50 ಮಂದಿಯಂತೆ ಪ್ರತಿ ತಾಲೂಕಿನಿಂದ 2 ರೈತರನ್ನು ಆಯ್ಕೆಮಾಡಿ ಒಂದು ಗುಂಪು ರಚಿಸಿ ಒಟ್ಟು 500 ಜನರಿಗೆ ತರಬೇತಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, 6 ದಿನ ನಡೆಯುವ ಈ ತರಬೇತಿಯಲ್ಲಿ ಕೊನೆಯ 2 ದಿನಗಳನ್ನು ಮಾರ್ಕೆಟಿಂಗ್, ಬ್ರಾಂಡ್ ಗಾಗಿ ಹೆಚ್ಚಿನ ಒತ್ತು ನೀಡಲು ಕೃಷಿ ಸಚಿವರು ಸಲಹೆ ನೀಡಿದರು. ವಿಶೇಷವಾಗಿ ಮೆಕ್ಕೆಜೋಳ, ತೊಗರಿ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆಯೂ ಬಿ.ಸಿ.ಪಾಟೀಲ್ ಸಭೆಯಲ್ಲಿ ಚರ್ಚಿಸಿದರು.
ಈ ವೇಳೆ ಮಾತನಾಡಿದ ಬಿ.ಸಿ.ಪಾಟೀಲ್, ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಉತ್ಪಾದಕ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಒಂದು ಜಿಲ್ಲೆ, ಒಂದು ಉತ್ಪನ್ನ ಅಥವಾ ಬೆಳೆಯನ್ನು ಪ್ರೋತ್ಸಾಹಿಸುವುದು ಆಗಿರುತ್ತದೆ. ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಒಂದು ಜಿಲ್ಲೆ ಒಂದು ಉತ್ಪನ್ನ (ಬೆಳೆ) ಯೋಜನೆಯಡಿ ಉತ್ಪನ್ನಗಳನ್ನು ಗುರುತಿಸಿ, ಈ ಉತ್ಪನ್ನದ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ, ಮಾರುಕಟ್ಟೆಗೆ ಪ್ರೋತ್ಸಾಹಿಸಲು ತರಬೇತಿ ನೀಡುತ್ತಿರುವುದಾಗಿ ಮಾಹಿತಿ ನೀಡಿದರು.