ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದ ಸೇವಾ ಭಾರತೀ ಯುವಕರ ತಂಡ ಸಂಘಟನೆಯ ಜೊತೆಗೆ ಜೀವದಾನದ ಕೈಂಕರ್ಯ ಮೂಲಕ ನಾಡಿನ ಗಮನಸೆಳೆದಿದೆ. ಕೋವಿಡ್ ಕೇರ್ ವಿಚಾರದಲ್ಲಿ ಜಾತಿ ಮತ ಧರ್ಮ ಎನ್ನದೆ ಕಾರ್ಯನಿರ್ವಹಿಸಿದ್ದ ಈ ಹಿಂದೂ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಬಂಧುಗಳ ಬಗ್ಗೆಯೂ ವಹಿಸಿದ್ದ ಕಾಳಜಿಯ ವೈಖರಿ ಭಾರೀ ಸುದ್ದಿಯಾಗಿತ್ತು. ಇದರ ಜೊತೆಯಲ್ಲೇ ರಕ್ತದಾನದ ಬಗ್ಗೆ ಊರೂರು ತಿರುಗಿ ಅರಿವು ಮೂಡಿಸುವ ಇವರ ಪ್ರಯತ್ನಕ್ಕೂ ಸಾರ್ವಜನಿಕ ವಲಯದಲ್ಲಿ ಶಹಬ್ಬಾಸ್‌ಗಿರಿ ವ್ಯಕ್ತವಾಗಿದೆ.
ಈ ನಡುವೆ ಮಂಗಳೂರು ಹೊರವಲಯದ ತುಂಬೆ ಬಳಿ ಬಂಟ್ವಾಳ ತಾಲೂಕು ಹಿಂದೂ ಜಾಗರಣಾ ವೇದಿಕೆ ಸಹಭಾಗಿತ್ವದಲ್ಲಿ ಸೇವಾ ಭಾರಿತಿ ಯುವಕರು ರಕ್ತದಾನ ಶಿಬಿರ ಆಯೋಜಿಸಿ ಹಲವರ ಪಾಲಿಗೆ ಬೆಳಕಾಗಿದ್ದಾರೆ. ಆದರ್ಶ ಪುರುಷರೊಬ್ಬರ ನೆನಪಿನಂಗಳದಲ್ಲಿ ಬೆಳೆದ ಯುವಕರು ಅವರ ಸ್ಮರಣಾರ್ಥ ಆಯೋಜಿಸಿದ ಈ ರಕ್ತ ಸಮರ್ಪಣೆಯ ಶಿಬಿರ ಅರ್ಥಪೂರ್ಣ ಎನಿಸಿದೆ.
ವರ್ಷದ ಹಿಂದೆ ವಿಧಿವಶರಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮಾರ್ಗದರ್ಶಕರಾಗಿದ್ದ ದಿ.ವೆಂಕಟರಮಣ ಹೊಳ್ಳರ ಸಂಸ್ಮರಣಾರ್ಥ ಇದು 35ನೇ ರಕ್ತದಾನ ಶಿಬಿರ”. ತುಂಬೆ ಶ್ರೀರಾಮ ನಗರದ ಶ್ರೀ ಶಾರದಾ ಸಭಾ ಭವನದಲ್ಲಿ ನಡೆದ ಈ ಶಿಬಿರದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮತ್ತು ವೆನ್ಲಾಕ್ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಸಮೂಹದ ಸಹಭಾಗಿತ್ವವೂ ಗಮನಸೆಳೆದವು.
ಯಾರು ಈ ಹೊಳ್ಳರು..?
ದಿವಂಗತ ವೆಂಕಟರಮಣ ಹೊಳ್ಳರು ಅವಿವಾಹಿತರಾಗಿದ್ದುಕೊಂಡೇ ರಾಷ್ಟ್ರೀಯತೆಗಾಗಿ ಬದುಕು ಸಮರ್ಪಿಸಿದವರು. ತನ್ನ ಇಡೀ ಜೀವನವನ್ನೇ ಸಂಘದ ಸೇವೆಗಾಗಿ ಮುಡುಪಾಗಿಟ್ಟಿದ್ದರು. ಗಣವೇಶಧಾರಿಯಾಗಿ ಸಂಘದ ಸಮಾರಂಭದಲ್ಲಿ ಭಾಗಿಯಾದ ಸಂದರ್ಭವನ್ನು ಹೊರತುಪಡಿಸಿ ಅವರೆಂದೂ ಪಾದುಕೆಯನ್ನು ಧರಿಸಲೇ ಇಲ್ಲ, ಜೀವನದುದ್ದಕ್ಕೂ ಬರೀಗಾಲಲ್ಲೇ ಸಂಚರಿಸಿ ಸಂಘ ಸೇವೆಯನ್ನು ಭಗವಂತನ ಸೇವೆ ಎಂಬಂತೆ ನಿಷ್ಠೆಯಿಂದ ಕೈಗೊಂಡು ಇಡೀ ಹಿಂದೂ ಸಮಾಜಕ್ಕೆ ಆದರ್ಶವಾದವರು. ತನ್ನ ಉಸಿರಿರುವ ಕೊನೆ ಘಳಿಗೆಯಲ್ಲೂ, ಇಳಿವಯಸ್ಸಿನಲ್ಲೂ ರಕ್ತದಾನದ ಸೇವೆಯನ್ನು ಸಮರ್ಪಿಸಿ ರಾಷ್ಟ್ರಸೇವೆಯ ವೃತವನ್ನಾಚರಿಸಿದ ಪೂಜ್ಯರು.
ತುಂಬೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ದಿ.ವೆಂಕಟರಮಣ ಹೊಳ್ಳರ ಆದರ್ಶ ಬದುಕನ್ನು ಸ್ಮರಿಸಿ ಅವರಿಗೆ ಗೌರವ ನಮನ ಸಲ್ಲಿಸಿದರು. ಹೊಳ್ಳರ ಆದರ್ಶಪೂರ್ಣ ಜೀವನವನ್ನು ದಾರಿದೀಪವನ್ನಾಗಿಸಿ ಇಡೀ ಹಿಂದೂ ಸಮಾಜ ಇಂದು ವಿವಿಧೆಡೆ ಸಾಮಾಜಿಕವಾಗಿ ಸೇವೆಗೈಯ್ಯುತ್ತಿರುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಆರೆಸ್ಸೆಸ್‌ನ ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಾಣ್ ನುಡಿದರು.
ತುಂಬೆ ಗ್ರಾಮದಲ್ಲಿ ಅತಿ ದೊಡ್ಡ ಕೊರೊನಾ ವಾರಿಯರ್ಸ್ ರೂಪದಲ್ಲಿ ಜನರ ಸೇವೆ ಮಾಡಿದ ಖ್ಯಾತ ವೈದ್ಯ ಡಾ. ರಘುರಾಮ ಶೆಟ್ಟಿ ಗುಳ್ಳಾಡಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಕ್ತದಾನ ಮಾಡುತ್ತಾ ರಕ್ತದ ಬೇಡಿಕೆಗೆ ಸ್ಪಂದಿಸುತ್ತಿರುವ “ಯುವಶಕ್ತಿ ರಕ್ತನಿಧಿ” ತಂಡದ ಕಾರ್ಯಕರ್ತರನ್ನೂ ಸನ್ಮಾನಿಸಿ ಅಭಿನಂದಿಸಲಾಯಿತು.
ಉದ್ಯಮಿಗಳಾದ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಕಿಶೋರ್ ಕುಮಾರ್, ಹಿಂ.ಜಾ.ವೇ ಜಿಲ್ಲಾಧ್ಯಕ್ಷರಾದ ಜಗದೀಶ್ ಹೊಳ್ಳರಬೈಲ್, ಹಿಂ.ಜಾ.ವೇ ತಾಲೂಕು ಅಧ್ಯಕ್ಷ ತಿರುಲೇಶ್ ಬಡಗಬೆಳ್ಳೂರು ಮತ್ತು ಹಿಂ.ಜಾ.ವೇ ತುಂಬೆ ವಲಯ ಅಧ್ಯಕ್ಷ ವಿಜಯ್ ಕುಮಾರ್ ಕಜೆಕಂಡ ಮೊದಲಾದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೊಡ್ಮಣ್ ಕಾಂತಪ್ಪ ಶೆಟ್ಟಿ, ತೇವು ತಾರಾನಾಥ ಕೊಟ್ಟಾರಿ, ಗಣೇಶ್ ಸುವರ್ಣ ತುಂಬೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಮಾಧವ ನಾಣ್ಯ, ಪ್ರವೀಣ್ ಬಿ ತುಂಬೆ, ಸುರೇಶ್ ನಾಯ್ಕ, ದಾಮೋದರ ನೆತ್ತರಕೆರೆ, ಮನೋಹರ ಕುಂಜತ್ತೂರು, ಪ್ರಶಾಂತ್ ಕೆಂಪು ಗುಡ್ಡೆ, ಸುಧಾಕರ ರಾಮಲ್ ಕಟ್ಟೆ, ಸಿದ್ದಪ್ಪ ಅಂಗಡಿ, ರಾಘವ ಬಂಗೇರ ಪೇರ್ಲಬೈಲ್, ಪುರುಷೋತ್ತಮ ಗಟ್ಟಿ, ಯೋಗೀಶ್ ಕೋಟ್ಯಾನ್, ಯಶವಂತ ಬೊಳ್ಳಾರಿ, ಸುಶಾನ್ ಆಚಾರ್, ಜಗದೀಶ್ ಕಡೆಗೋಳಿ, ಕಿಶೋರ್ ರಾಮಲ್ ಕಟ್ಟೆ, ಅರುಣ್ ಗಾಣದಲಚ್ಚಿಲ್ ಸೇರಿದಂತೆ ಹಿತೈಷಿಗಳು ಸೇರಿದಂತೆ ಸಂಘದ ಹಲವು ಪ್ರಮುಖರು, ದೇವದುರ್ಲಭ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ರಕ್ತದಾನ ಮಾಡಿದರು. ಮಹಿಳೆಯೊಬ್ಬರು ತನ್ನ ಜನುಮದಿನವನ್ನು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಸುಶಾನ್ ಆಚಾರ್ ಸ್ವಾಗತಿಸಿದರು. ಜಗದೀಶ್ ಕಡೆಗೋಳಿ ನಿರೂಪಿಸಿದರು.