ಬೆಂಗಳೂರು: ಸದಾ ಒಂದಿಲ್ಲೊಂದು ಅವಾಂತರಗಳಿಂದ ಚರ್ಚೆಗೆ ಗ್ರಾಸವಾಗುತ್ತಿರುವ ಸಚಿವ ಡಾ.ಅಶ್ವತ್ಥನಾರಾಯಣ್ ಅವರ ಖಾತೆ ಇದೀಗ ಪರಿಶಿಷ್ಟ ವಿದ್ಯಾರ್ಥಿಗಳಿಗಾಗಿರುವ ಅನ್ಯಾಯದ ವಿಚಾರದಲ್ಲೂ ವಿವಾದಕ್ಕೆ ಗುರಿಯಾಗಿದೆ. ಇಂಥದ್ದೊಂದು ಪುರಾಣ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಈ ವಿವಾದವನ್ನು ಮಾಜಿ ಶಾಸಕ ರಮೇಶ್ ಬಾಬು ಅವರು ಬಯಲಿಗೆಳೆದಿದ್ದಾರೆ.
ಏನಿದು ವಿವಾದ?
ಬೆಂಗಳೂರು ವಿಶ್ವ ವಿದ್ಯಾಲಯ 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ವಿಚಾರದಲ್ಲಿ ಅವೈಜ್ಞಾನಿಕ ಕ್ರಮ ಜಾರಿಗೊಳಿಸಿದೆ. ಪರಿಶಿಷ್ಟ ವಿದ್ಯಾರ್ಥಿಗಳು ಎರಡನೇ ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಹಾಸ್ಟೆಲ್ ಪ್ರವೇಶಾವಕಾಶ ನೀಡಲೇಬಾರದೆಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸುತ್ತೋಲೆ ಹೊರಡಿಸಲಾಗಿದೆ.
ಈ ಸುತ್ತೋಲೆಯ ಪ್ರತಿಯನ್ನು ಬಹಿರಂಗಪಡಿಸಿರುವ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ರಮೇಶ್ ಬಾಬು, ಈ ವಿವಾದಿತ ಸುತ್ತೋಲೆಯನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವರ ಸೂಚನೆಗೆ ಅನುಗುಣವಾಗಿ ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯು ದಲಿತರ ವಿರೋಧಿ ಮತ್ತು ದಲಿತರ ವ್ಯಾಸಂಗಕ್ಕೆ ಅಡ್ಡಿಪಡಿಸುವ ಮನಸ್ಥಿತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸುವುದರ ಮೂಲಕ ತನ್ನ ಹಿಡನ್ ಅಜೆಂಡಾ ಜಾರಿಗೊಳಿಸಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಶತ ಶತಮಾನಗಳಿಂದ ಶೋಷಣೆ ಮತ್ತು ತುಳಿತಕ್ಕೆ ಒಳಗಾಗಿರುವ ದಲಿತ ಸಮುದಾಯದಲ್ಲಿ ಇಂದಿಗೂ ಸ್ನಾತಕೋತ್ತರ ಮತ್ತು ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಜನಸಂಖ್ಯಾನುಪಾತಕ್ಕೆ ಅನುಗುಣವಾಗಿ ಇರುವುದಿಲ್ಲ. ಸರ್ಕಾರದ ಎಲ್ಲಾ ರೀತಿಯ ಬೆಂಬಲ ಮತ್ತು ಸಹಾಯದ ನಡುವೆಯೂ ಸ್ನಾತಕೋತ್ತರ ಹಾಗೂ ಉನ್ನತ ವ್ಯಾಸಂಗಕ್ಕೆ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದು ಪರಿಸ್ಥಿತಿ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.

ಸರ್ಕಾರದ ನೀತಿ ಮತ್ತು ನಿರೂಪಣೆಗಳು ಯಾವತ್ತೂ ದಲಿತ ವರ್ಗದ ಪರವಾಗಿ ಇರಬೇಕಾಗುತ್ತದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯವು ರಾಜ್ಯ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳಲ್ಲಿ ದಲಿತ ವರ್ಗದ ವಿದ್ಯಾರ್ಥಿಗಳಿಗೆ ಒಮ್ಮೆ ಮಾತ್ರ ಸೌಲಭ್ಯದ ಅವಕಾಶವನ್ನು ಕಲ್ಪಿಸಿ, ಎರಡನೇ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಾಂಗದ ವೇಳೆ ವಿದ್ಯಾರ್ಥಿ ನಿಲಯದ ಅವಕಾಶ ದೊರಕದಂತೆ ಹೊರಡಿಸಿರುವ ಸುತ್ತೋಲೆಯು ಅಕ್ರಮ ಮತ್ತು ದಲಿತ ವಿರೋಧಿ ನೀತಿಯಾಗಿದೆ ಎಂದು ರಮೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿಶ್ವ ವಿದ್ಯಾನಿಲಯದ ಕುಲ ಸಚಿವರು ಹೊರಡಿಸಿರುವ ದಲಿತ ವಿರೋಧಿ ಸುತ್ತೋಲೆಯನ್ನು ಬೆಂಗಳೂರು ವಿಶ್ವ ವಿದ್ಯಾಲಯ ಕೂಡಲೇ ಹಿಂದಕ್ಕೆ ಪಡೆಯಬೇಕು. ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವರು ದಲಿತ ಧಮನಕಾರಿಯಾ ನೀತಿಗಳನ್ನು ಕೈಬಿಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ ಎಂದಿರುವ ರಮೇಶ್ ಬಾಬು, ವಿಶ್ವ ವಿದ್ಯಾಲಯದಲ್ಲಿ ದಲಿತ ಧಮನಕಾರಿಯಾ ಸುತ್ತೋಲೆಯನ್ನು ಹೊರಡಿಸಿರುವ ಕುಲಸಚಿವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ದಲಿತ ವಿರೋಧಿ ನೀತಿಯನ್ನು ಪದೇ ಪದೇ ಜಾಹೀರು ಮಾಡಿದೆ ಬಿಜೆಪಿ hidden agenda ಬೆತ್ತಲೆ ಆಗಿದೆ
ದಲಿತ ವಿದ್ಯಾರ್ಥಿಗಳಿಗೆ ಎರಡನೇ ಸ್ನಾತಕೋತ್ತರ ಪದವಿಗೆ hostel ಅವಕಾಶ ನೀಡದಂತೆ ಸುತ್ತೋಲೆ ನೀಡಿ ಅವರ ಹಕ್ಕು ಕಸಿಯಲು ಶಿಕ್ಷಣ ವಂಚಿತ ಮಾಡಲು ಹೊರಟಿದೆ
ಬಿಜೆಪಿ ದಲಿತ ವಿರೋಧಿ ನೀತಿಗೆ ಧಿಕ್ಕಾರ #media #congress pic.twitter.com/NOUzN8YGur— Ramesh Babu (@RameshBabuKPCC) December 3, 2022
























































