ಬೆಂಗಳೂರು: ಬೆಂಗಳೂರು ಗಾಲ್ಫ್ ಕ್ಲಬ್ ನಲ್ಲಿ ಭೂಮಿ ಪಡೆದು ಸದಸ್ಯತ್ವ ನೀಡುವ ಹಗರಣ ನಡೆದಿದೆ ಎಂದು ಎಐಸಿಸಿ ವಕ್ತಾರರಾದ ಗೌರವ್ ವಲ್ಲಬ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಪತ್ರಿಕೆ ತೆಗೆದರೆ ಸಾಕು ಈ ಸರ್ಕಾರದ ಒಂದೊಂದು ಹೊಸ ಹಗರಣಗಳು ಹೊರಬರುತ್ತಿವೆ. ಮೊಟ್ಟೆ ಹಗರಣ, ಕೋವಿಡ್ ಹಗರಣ, ಟೆಂಡರ್ ಹಗರಣ, ರಾಘವೇಂದ್ರ ಬ್ಯಾಂಕ್ ಹಗರಣ, ಬಿಡಿಎ ಹಗರಣ ನಡೆದಿದ್ದು, ಈಗ ಹೊಸ ಹಗರಣ ಮಾಡಲಾಗಿದೆ. ಅದೇನೆಂದರೆ ಬೆಂಗಳೂರು ಗಾಲ್ಫ್ ಕ್ಲಬ್ ನಲ್ಲಿ ಭೂಮಿ ಪಡೆದು ಸದಸ್ಯತ್ವ ನೀಡುವ ಹಗರಣ ನಡೆದಿದೆ ಎಂದರು.
ಈ ಕ್ಲಬ್ ನ ಲೀಸ್ ಅವಧಿ 2021ನೇ ಸಾಲಿನಲ್ಲಿ ಅಂತ್ಯಗೊಂಡಿದ್ದು, ಸರ್ಕಾರ ಈ ಲೀಸ್ ಅವಧಿ ವಿಸ್ತರಣೆ ಮಾಡಲು ಆಸಕ್ತಿ ತೋರಲಿಲ್ಲ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಕೆಲ ದಿನಗಳ ಮುಂಚಿತವಾಗಿ 30 ವರ್ಷಗಳಿಗೆ ಲೀಸ್ ಅನ್ನು ವಿಸ್ತರಣೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಈ ಭ್ರಷ್ಟ ಸರ್ಕಾರ 12 ಬಿಜೆಪಿ ಶಾಸಕರು ಹಾಗೂ ನಾಯಕರು ಕ್ಲಬ್ ನ ಸದಸ್ಯತ್ವ ಪಡೆದಿದ್ದಾರೆ. ದೇಶದ ಅತ್ಯಂತ ಪ್ರತಿಭಾನ್ವಿತ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಚಿಕ್ಕರಂಗಪ್ಪ ಅವರಿಗೆ ಸಿಗದ ಸದಸ್ಯತ್ವ ಬಿಜೆಪಿ ಶಾಸಕರು ಹಾಗೂ ನಾಯಕರಿಗೆ ಸಿಕ್ಕಿದೆ ಎಂದ ಅವರು, ಈ ಸದಸ್ಯತ್ವಕ್ಕಾಗಿ ಸರ್ಕಾರ ಭೂಮಿ ನೀಡಿದೆ. ಈ ಸರ್ಕಾರ ಪ್ರತಿ ಹೆಜ್ಜೆಯಲ್ಲೂ 40% ಸರ್ಕಾರದ ಭ್ರಷ್ಟಾಚಾರ ಕಾಣಸಿಗುತ್ತಿದೆ. ಈ ಕ್ಲಬ್ ಸದಸ್ಯತ್ವ ಪಡೆಯಲು ಅನೇಕ ವರ್ಷಗಳಿಂದ ಕಾಯುತ್ತಿದ್ದು, ಅವರ ಸದಸ್ಯತ್ವವನ್ನು ಬಿಜೆಪಿ ನಾಯಕರು ಕಸಿದುಕೊಂಡಿದ್ದಾರೆ ಎಂದು ಗಮನಸೆಳೆದರು.
ಈ ರೀತಿ ಅಕ್ರಮವಾಗಿ ಗಾಲ್ಫ್ ಕ್ಲಬ್ ಸದಸ್ಯತ್ವ ಪಡೆದಿರುವ ಬಿಜೆಪಿ ನಾಯಕರ ಪಟ್ಟಿ ಬೇಕು. ಬೆಂಗಳೂರು ನಗರದ ಜನ, ಕ್ರೀಡಾಸಕ್ತರು ಈ ಸದಸ್ಯತ್ವ ಯಾರು ಪಡೆದಿದ್ದಾರೆ ಎಂದು ತಿಳಿಯಬೇಕಿದೆ. ಈ ಸರ್ಕಾರದ ಹಗರಣಗಳಿಂದ ಜನ ಸಾಕಾಗಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ನೈತಿಕತೆಯ ಆಧಾರದ ಮೇಲೆ ಈ ನಾಯಕರು ಏ.23ರ ಒಳಗಾಗಿ ತಮ್ಮ ನಾಮಪತ್ರ ಹಿಂಪಡೆದು ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎಂದರು.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಕರ್ನಾಟಕದ ಅಸ್ಮಿತೆಗೆ ಧಕ್ಕೆ ಮಾಡಿದ್ದಾರೆ. ಅವರು ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುತ್ತಾ ಕರ್ನಾಟಕ ರಾಜ್ಯದ ಜನರಿಗೆ ಮೋದಿ ಅವರ ಆಶೀರ್ವಾದ ಬೇಕು ಎಂದು ಹೇಳಿದ್ದಾರೆ. ನಮ್ಮ ಪರಂಪರೆ, ಸಂಸ್ಕೃತಿಯಲ್ಲಿ ನಮಗೆ ದೇವರು, ತಂದೆ ತಾಯಿ, ಹಿರಿಯರ ಆಶೀರ್ವಾದ ಬೇಕು ಎಂದು ನಾವು ಕಲಿತಿದ್ದೇವೆ. ಆದರೆ ಇವರು ಮೋದಿ ಅವರ ಆಶೀರ್ವಾದ ಬೇಕು ಎನ್ನುತ್ತಿದ್ದಾರೆ. ಮೋದಿ ಅವರ ಆಸೀರ್ವಾದ ಯಾಕೆ ಬೇಕು? 40% ಕಮಿಷನ್ ಭ್ರಷ್ಟಾಚಾರ ಮಾಡುವುದಕ್ಕೇ? ಕೋವಿಡ್, ಭೂ ಹಗರಣ, ನೇಮಕಾತಿ ಹಗರಣ ಮಾಡಲು ಆಶೀರ್ವಾದ ಬೇಕಾ? ಕನ್ನಡಿಗರಿಗೆ 40% ಸರ್ಕಾರದಿಂದ ಯಾವುದೇ ಆಶೀರ್ವಾದ ಬೇಡ. ಕಾರಣ ಇದು ಆಶೀರ್ವಾದವಲ್ಲ, ಇದೊಂದು ಶಾಪ. ಕನ್ನಡಿಗರಿಗೆ ಮೋದಿ ಆಶೀರ್ವಾದ ಬೇಕು ಎಂದು ಹೇಳುವುದು ಬಿಜೆಪಿಯ ಸಂಸ್ಕೃತಿಯಾದರೆ, ನಮಗೆ ಕನ್ನಡಿಗರ ಆಶೀರ್ವಾದ ಬೇಕು ಎಂದು ಹೇಳುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಅವರು ಟೀಕಿಸಿದರು.

























































