ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಬೆನ್ನತ್ತಿರುವ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಿಗ್ಗೆ ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ಕಾರ್ಯಾಚರಣೆ ಕೈಗೊಂಡು ಸಂಚಲನ ಮೂಡಿಸಿದ್ದಾರೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ವಿವಿಧೆಡೆ ಅಧಿಕಾರಿಗಳ ನಿವಾಸ ಮೇಲೆ ಲೋಕಾಯುಕ್ತ ಪೊಲೀಸರು ಲಗ್ಗೆ ಹಾಕಿದ್ದಾರೆ. ಬೆಂಗಳೂರು, ಕೋಲಾರ ದಾವಣಗೆರೆ, ಚಿತ್ರದುರ್ಗ, ಬೀದರ್, ಸಹಿತ ಹಲವೆಡೆ ಈ ಕಾರ್ಯಾಚರಣೆ ನಡೆದಿದೆ.
ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಅವರ ಬೆಂಗಳೂರಿನ ಯಲಹಂಕದಲ್ಲಿರುವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ದಾವಣಗೆರೆಯಲ್ಲಿ ನಿವೃತ್ತ ಡಿಸಿಎಫ್ ನಾಗರಾಜ್ ನಿವಾಸದ ಮೇಲೆ ಲೋಕಾಯುಕ್ತ ತಂಡ ದಾಳಿ ಮಾಡಿದೆ. ಅವರ ಶಿವಮೊಗ್ಗದ ಮನೆಗೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ನಾಗರಾಜ್ ಅವರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ತಹಶೀಲ್ದಾರ್ ನಾಗರಾಜ್ ಅವರ ಮನೆಮೇಲೂ ದಾಳಿ ನಡೆದಿದೆ. ಶಿಕಾರಿಪುರದಲ್ಲಿರುವ ಅವರ ಮನೆ ಹಾಗೂ ಕಚೇರಿಯಲ್ಲಿ ಲೋಕಾ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಕೋಲಾರದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಎನ್.ವೆಂಕಟೇಶಪ್ಪ ಅವರಿಗೆ ಸೇರಿದ್ದೆನ್ನಲಾದ 5 ಮನೆಗಳ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಬಂಗಾರಪೇಟೆ, ಮುಳಬಾಗಿಲು ತಾಲೂಕಿನ ವಿವಿಧೆಡೆ ಈ ಕಾರ್ಯಾಚರಣೆ ನಡೆದಿದೆ.
ಬೀದರ್ ಜಿಲ್ಲೆಯ 6 ಕಡೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಸವಕಲ್ಯಾಣ ತಾಲೂಕಿನ ಮುಡಬಿಯ ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿ ಮನೆಗಳ ಮೇಲೆ ದಾಳಿ ನಡೆದಿದೆ. ಮತ್ತೊಬ್ಬ ಅಧಿಕಾರಿ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಮೇದಾ ಅವರ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ.





















































