ಬೆಂಗಳೂರು: ಕೃಷಿ ಕಾಯ್ದೆ ವಿರುದ್ಧ ಸಂಘಟನೆಗಳು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದು, ಈ ಚಳವಳಿಯಲ್ಲಿ ರಾಜ್ಯದ ಅನ್ನದಾತರೂ ಭಾಗವಹಿಸಲು ನಿರ್ಧರಿಸಿದ್ದಾರೆ. ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ದೆಹಲಿಯ ಐತಿಹಾಸಿಕ ರೈತ ಚಳುವಳಿಯಲ್ಲಿ ಭಾಗವಹಿಸಲು ಕರ್ನಾಟಕದಿಂದ ತಂಡವೊಂದನ್ನು ಬೀಳ್ಕೊಡಲಾಯಿತು. ಅನೇಕ ರೈತರೂ ಇದರಲ್ಲಿ ಭಾಗಿಯಾಗಿದ್ದಾರೆ.
ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್, ರಾಜ್ಯ ಕಾರ್ಯದರ್ಶಿಗಳಾದ ಕೆ.ಸೋಮಶೇಖರ್ ಯಾದಗಿರಿ, ಸೆಕ್ರೆಟರಿಯೇಟ್ ಸದಸ್ಯರಾದ ವೀರೇಶ್ ಹಾಗೂ ಇತರೆ ಮುಖಂಡರು, ಕಾರ್ಯಕರ್ತರು ಸೇರಿ ಶುಕ್ರವಾರ ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕರ್ನಾಟಕದಿಂದ ದೆಹಲಿಗೆ ಹೊರಟ ಹೋರಾಟಗಾರರ ತಂಡವು ಜನವರಿ 24 ರಂದು ದೆಹಲಿಗೆ ತಲುಪುತ್ತದೆ. ನಂತರ ಜನವರಿ 26 ಗಣರಾಜ್ಯೋತ್ಸವದಂದು ನಡೆಯುವ ರೈತರು ಮತ್ತು ಕೃಷಿಕಾರ್ಮಿಕರ ಪರ್ಯಾಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿದೆ ಎಂದು ಮುಖಂಡರು ತಿಳಿಸಿದ್ದಾರೆ.