ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಬಾದಾಮಿಯಲ್ಲಿ ಸಮಸ್ಯೆ ಹೇಳಲು ಬಂದ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಅವಮಾನಿಸಿ ವೇದಿಕೆಯಿಂದ ಕೆಳಗಿಳಿಸಿರುವುದು ಪಂಚಾಯತ್ ರಾಜ್ ವ್ಯವಸ್ಥೆಗೆ ಮಾಡಿದ ಮಾಡಿದ ಅವಮಾನ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಟೀಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಪ್ಟನ್ ಕಾರ್ಣಿಕ್, ಪಂಚಾಯತ್‌ರಾಜ್ ವ್ಯವಸ್ಥೆಯ ಕುರಿತಾಗಿ ಸಿದ್ದರಾಮಯ್ಯರಿಗೆ ಇರುವ ತಿರಸ್ಕಾರದ ಪ್ರತಿಬಿಂಬ ಇದಾಗಿದೆ ಎಂದು ಬೊಟ್ಟು ಮಾಡಿದ್ದಾರೆ.
‘ಯಾರೂ ಹಳ್ಳಿ ಕಡೆಗೆ ಬಂದಿಲ್ಲ; ಆಶ್ರಯ ಮನೆಗಳು ಹಾಳಾಗಿ ಹೋಗಿವೆ. ಸಿದ್ದರಾಮಯ್ಯ ಬಂದು ಹೋದ್ರೂ ಕಾಮಗಾರಿ ಸರಿಯಾಗಿಲ್ಲ’ ಎಂದು ತಿಳಿಸುತ್ತಿದ್ದ ಬಾದಾಮಿಯ ನೂತನ ಗ್ರಾಮ ಪಂಚಾಯತ್ ಸದಸ್ಯ ಸಂಗಣ್ಣ ಜಾಬಣ್ಣನವರನ್ನು ಸಿದ್ದರಾಮಯ್ಯ ಅವರು ದೂಡಿದ್ದಾರೆ ಎಂಬ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣದ ಪ್ರಕಟಣೆ ಬಗ್ಗೆ ಗಮನ ಸೆಳೆದಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಇದು ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯರವರು ಮಾಡಿದ ಅವಮಾನ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಈ ಅತಿರೇಕದ ವರ್ತನೆಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.





















































