ಮಂಗಳೂರು: ರಸ್ತೆ ಅಪಘಾತಗಳನ್ನು ತಡೆಯುವ ಹಿನ್ನಲೆಯಲ್ಲಿ ವೈಜ್ಞಾನಿಕ ಹಾಗೂ ಪಾರದರ್ಶಕ ಚಾಲನಾ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ರೂ.7.5 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥವನ್ನು ಗುರುವಾರ ಉದ್ಘಾಟಿಸಲಾಯಿತು.
ಈ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತರಿದ್ದರು. ಸಾರಿಗೆ ಇಲಾಖೆಯು ರಾಜ್ಯದ ಜ್ಞಾನಭಾರತಿ, ಎಲೆಕ್ಟ್ರಾನಿಕ್ ಸಿಟಿ, ಮೈಸೂರು, ಕಲಬುರಗಿ, ಧಾರವಾಡ, ಶಿವಮೊಗ್ಗ ಹಾಗೂ ಹಾಸನದಲ್ಲಿಯೂ ಇಂತಹ ಚಾಲನಾ ಪಥಗಳನ್ನು ರೂ.31.21 ಕೋಟಿಯ ವೆಚ್ಚದಲ್ಲಿ ನಿರ್ಮಿಸಿದೆ.
ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ:
ರಾಜ್ಯದ ವಿವಿಧ ಸಾರಿಗೆ ಕಛೇರಿಗಳಿಗೆ ಒಟ್ಟು ರೂ. 36 ಕೋಟಿ ವೆಚ್ಚದಲ್ಲಿ ಧಾರವಾಡ ಪೂರ್ವ, ಕೊಪ್ಪಳ, ಶಿರಸಿ, ದಾಂಡೇಲಿ, ಭಾಲ್ಕಿ ಹಾಗೂ ಚಿಂತಾಮಣಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ನಡೆಯುತ್ತಿದೆ.
ಬೀದರ್, ಕಲಬುರಗಿ, ಯಾದಗಿರಿ, ಕೆ.ಜಿ.ಎಫ್., ಚಂದಾಪುರ ಮತ್ತು ಬೆಳಗಾವಿಯಲ್ಲಿ ರೂ.42 ಕೋಟಿ ವೆಚ್ಚದ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ.
ವ್ಯಾಪಕ ಮಾದರಿಯಲ್ಲಿ ಡ್ರೈವಿಂಗ್ ಪಥ ನಿರ್ಮಾಣ
- ಬೆಳಗಾವಿ ಹಾಗೂ ರಾಯಚೂರಿನಲ್ಲಿ ರೂ.16 ಕೋಟಿಗೆ ನಿರ್ಮಾಣ ಹಂತದಲ್ಲಿರುವ ಡ್ರೈವಿಂಗ್ ಪಥಗಳಲ್ಲಿ ಸೆನ್ಸಾರ್ ಅಳವಡಿಕೆ ನಡೆಯುತ್ತಿದೆ.
- ದೇವನಹಳ್ಳಿ, ಕೋಲಾರ, ಗದಗ, ಬಳ್ಳಾರಿ, ವಿಜಯಪುರ, ಯಾದಗಿರಿ, ದಾವಣಗೆರೆ ಸೇರಿ 9 ನಗರಗಳಲ್ಲಿ ರೂ.80 ಕೋಟಿಯ ವೆಚ್ಚದಲ್ಲಿ ಡ್ರೈವಿಂಗ್ ಪಥ ನಿರ್ಮಾಣ ಪ್ರಗತಿಯಲ್ಲಿದೆ.
- ನಾಗಮಂಗಲ, ಯಲಹಂಕ, ಶಿರಸಿ, ಸಕಲೇಶಪುರ ಸೇರಿದಂತೆ 13 ನಗರಗಳಲ್ಲಿ ರೂ.71 ಕೋಟಿಗೆ ಪಥ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
- ಪುತ್ತೂರು, ನೆಲಮಂಗಲ, ಮಧುಗಿರಿ, ಚಾಮರಾಜನಗರ ಸೇರಿದಂತೆ 8 ಸ್ಥಳಗಳಲ್ಲಿ ರಸ್ತೆ ಸುರಕ್ಷತಾ ನಿಧಿಯಿಂದ ರೂ.57 ಕೋಟಿ ವೆಚ್ಚದಲ್ಲಿ ಪಥ ನಿರ್ಮಾಣ ಮುಂದಾಗಿದೆ.
ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರ
ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಒಂದರಂತೆ ಪಿಪಿಪಿ ಮಾದರಿಯಲ್ಲಿ 32 ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಯೋದ್ಯಮ ನಡೆಯುತ್ತಿದೆ. ದೇವನಹಳ್ಳಿ, ಶಿವಮೊಗ್ಗ, ವಿಜಯಪುರ, ಕಲಬುರಗಿ, ಉಡುಪಿ, ಹಾವೇರಿ, ದಕ್ಷಿಣ ಕನ್ನಡ ಸೇರಿದಂತೆ ಬಹುಮಟ್ಟಿಗೆ ಕೇಂದ್ರಗಳ ಹಂಚಿಕೆ ನಡೆದಿದ್ದು, ಶೀಘ್ರದಲ್ಲೇ ಸ್ಥಾಪನೆಯಾಗಲಿವೆ ಎಂದು ಇಲಾಖೆ ತಿಳಿಸಿದೆ.