ಬೆಂಗಳೂರು: ತನ್ನ ಸಂಗಾತಿಯನ್ನು ಮಾರಕಾಸ್ತ್ರಗಳಿಂದ ಇರಿದ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಅಸ್ಸಾಂನ ಜುಂಟಿ ದಾಸ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆ ತನ್ನ ಸಂಗಾತಿ ಅಸ್ಸಾಂನ ಜೋಗೇಶ್ ಎಂಬಾತನಿಗೆ ಇರಿದಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಜುಂಟಿ ಮತ್ತು ಜೋಗೇಶ್ ಇಬ್ಬರಿಗೂ 37 ವರ್ಷ ವಯಸ್ಸು. ಈ ಪೈಕಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಜೋಗೇಶ್, ಈಜಿಪುರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸುಮಾರು ಎರಡು ವರ್ಷಗಳಿಂದ ಜುಂಟಿಯೊಂದಿಗೆ ಸಂಬಂಧ ಹೊಂದಿದ್ದ ಈತ ಇತ್ತೀಚಿನ ದಿನಗಳಲ್ಲಿ, ಜೋಗೇಶ್ ಜುಂಟಿಯಿಂದ ದೂರವಾಗಲು ಪ್ರಾರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಕುಪಿತಳಾಗಿದ್ದ ಜುಂಟಿ ದಾಸ್ ಈ ಕೃತ್ಯ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 21 ರಂದು ಜುಂಟಿ ಅವರು ಜೋಗೇಶ್ ಅವರ ಮನೆಗೆ ಭೇಟಿ ನೀಡಿಡಾ ಸಂದರ್ಭದಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದ್ದಿತ್ತು. ಆ ವೇಳೆ ಜೋಗೇಶ್ ಹೊಟ್ಟೆಗೆ ಜುಂಟಿ ಚಾಕುವಿನಿಂದ ಇರಿದಿದ್ದಾಳೆ ಎನ್ನಲಾಗಿದೆ. ಈ ನಡುವೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಜುಂಟಿ, ರೈಲಿನಲ್ಲಿ ಅಸ್ಸಾಂಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.