ಬೆಂಗಳೂರು: ಆಶಾ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆ ಈಡೇರಿಸುವತ್ತ ರಾಜ್ಯ ಸರ್ಕಾರ ಚಿತ್ತ ಹರಿಸಿದೆ. ಆಶಾ ಕಾರ್ಯಕರ್ತೆಯರ ನಿಯೋಗದ ಜೊತೆ ಸಭೆ ನಡೆಸಿರುವ ಆರೋಗ್ಯ ಸಚಿವರು ಈ ಬಗ್ಗೆ ಪರಿಶೀಲಿಸುವಂತೆ ಇಲಾಖಾಧಿರಿಗಳಿಗೆ ಸೂಚಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮಗೆ ಸೂಕ್ತ ಪ್ರಮಾಣದಲ್ಲಿ ಗೌರವಧನ ನೀಡುತ್ತಿಲ್ಲ ಎಂದು ಸರ್ಕಾರದ ಗಮನಸೆಳೆದಿದ್ದರು. ಈವರೆಗೂ ಹಲವು ಸರ್ಕಾರಗಳು ಬಂದಿದ್ದರೂ ಈ ಬೇಡಿಕೆ ಬಗ್ಗೆ ಗಮನಹರಿಸಿಲ್ಲ. ಇದೀಗ ಆರೋಗ್ಯ ಸಚಿವ ಸುಧಾಕರ್ ಅವರು ಆಶಾಗಳ ಬದುಕು-ಬವಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆ ಯರ ಸಂಘದ ಅಧ್ಯಕ್ಷರಾದ ಕಾ.ಕೆ ಸೋಮಶೇಖರ್, ರಾಜ್ಯ ಕಾರ್ಯದರ್ಶಿ ಗಳಾದ ಕಾ.ನಾಗಲಕ್ಷ್ಮಿ , ರಾಜ್ಯ ಉಪಾಧ್ಯಕ್ಷರಾದ ರಮಾ, ಹನುಮೇಶ್ ಸಹಿತ ಪ್ರಮುಖರ ಜೊತೆ ಸಭೆ ನಡೆಸಿ ಆಶಾಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಚಿವರಿಂದ ಸಕಾರಾತ್ಮಕ ಭರವಸೆ ಸಿಕ್ಕಿದೆ ಎಂದು ಸಂಘದ ಅಧ್ಯಕ್ಷರಾದ ಕಾ.ಕೆ ಸೋಮಶೇಖರ್, ರಾಜ್ಯ ಕಾರ್ಯದರ್ಶಿ ಕಾ.ನಾಗಲಕ್ಷ್ಮಿ ತಿಳಿಸಿದ್ದಾರೆ.
ಗೌರವಧನ ಹೆಚ್ಚಳ ಮತ್ತು ಇನ್ನಿತರ ಬೇಡಿಕೆಗಳ ಬಗ್ಗೆ ಸಂಘದಿಂದ ನೀಡಿದ ಮನವಿ ಪತ್ರ ಆಧರಿಸಿ ಈ ಸಭೆ ನಡೆದಿದೆ. AIUTUC ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆ ಯರ ಸಂಘದ ಅಧ್ಯಕ್ಷರಾದ ಕಾ.ಕೆ ಸೋಮಶೇಖರ್, ರಾಜ್ಯ ಕಾರ್ಯದರ್ಶಿ ಗಳಾದ ಕಾ.ನಾಗಲಕ್ಷ್ಮಿ , ರಾಜ್ಯ ಉಪಾಧ್ಯಕ್ಷರಾದ ರಮಾ, ಹನುಮೇಶ್ ಇನ್ನಿತರ ಪದಾಧಿಕಾರಿಗಳ ನಿಯೋಗದ ಉಪಸ್ಥಿತಿಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಆರೋಗ್ಯ ಕಾರ್ಯದರ್ಶಿ ಅನಿಲ್ ಕುಮಾರ್, ಆಯುಕ್ತ ರಣದೀಪ್, ಅಭಿಯಾನ ನಿರ್ದೇಶಕರಾದ ಅರುಂಧತಿ, ಕಾರ್ಯಕ್ರಮಾಧಿಕಾರಿಗಳಾದ ಡಾ.ಪ್ರಭುಗೌಡ ಇನ್ನಿತರ ಅಧಿಕಾರಿಗಳ ಜೊತೆ ಚರ್ಚಿಸಿದರು.
ಈ ಮನವಿಗೆ ಸ್ಪಂಧಿಸಿದ ಸಚಿವ ಸುಧಾಕರ್, ಆಶಾಗಳಿಗೆ ಗೌರವಧನ ಹೆಚ್ಚಿಸುವ ಕುರಿತು ಮತ್ತು ಆಶಾಗಳ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆ ರೂಪಿಸುವ ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು. ಒಂದು ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.