ಬೆಂಗಳೂರು: ಕೊರೋನಾ ಸಂಕಷ್ಟದ ಸಙದರ್ಭದಲ್ಲೂ ಸ್ವಸ್ಥ ಸಮಾಜಕ್ಕಾಗಿ ದುಡಿಯವ ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರವನ್ನು ಎಬ್ಬಿಸುವ ಕೆಲಸ ಮಾಡಿದರು. ತಮಗೆ ಸುರಕ್ಷಾ ವ್ಯವಸ್ಥೆ ಕಲ್ಪಿಸಬೇಕು, ಗೌರವಧನ ಬಾಕಿ ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯದೆಲ್ಲೆಡೆ ಆಶಾ ಕಾರ್ಯಕರ್ತೆಯರು ಆನ್ಲೈನ್ ಪ್ರತಿಭಟನೆ ನಡೆಸಿದರು.
ರಾಜ್ಯ ವ್ಯಾಪಿಯಾಗಿ ಆನ್‌ಲೈನ್ ಪ್ರತಿಭಟನೆ ಆಶಾ ಕಾರ್ಯಕರ್ತೆಯರ ಮನೆಗಳಿಂದ ಮತ್ತು ಅವರ ಕೆಲಸದ ಸ್ಥಳಗಳಿಂದ ನಡೆಯಿತು. ಆಶಾ ಕಾರ್ಯಕರ್ತೆಯರು ರಾಜ್ಯ ವ್ಯಾಪಿಯಾಗಿ ಪ್ರತಿಭಟನೆಯ ಫೋಟೋಗಳನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸರ್ಕಾರಕ್ಕೆ ಹಾಗೂ ಇಲಾಖೆಗೆ ತಲುಪಿಸಿ ತಮ್ಮ ಹಕ್ಕೊತ್ತಾಯಗಳಿಗೆ ಪರಿಹಾರ ಒದಗಿಸಬೇಕೆಂದು ಗಮನಸೆಳೆದರು.
ಸಂಘದ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ ಯಾದಗಿರಿ ಅವರು ಯಾದಗಿರಿಯಿಂದ ರಾಜ್ಯ ಕಾರ್ಯದರ್ಶಿ ಡಿ ನಾಗಲಕ್ಷ್ಮೀ, ಬಳ್ಳಾರಿಯಿಂದ, ರಾಜ್ಯ ಉಪಾಧ್ಯಕ್ಷರಾದ ರಮಾ.ಟಿ.ಸಿ ಬೆಂಗಳೂರಿನಿಂದ, ಮತ್ತು ಡಿ.ಉಮಾದೇವಿ, ಯಾದಗಿರಿಯಿಂದ ಮತ್ತು ರಾಜ್ಯ ಖಜಾಂಚಿಯಾದ ಸಂಧ್ಯಾ ಪಿ.ಎಸ್ ಮೈಸೂರಿನಿಂದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು.
ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಕೊರೋನಾ ಸಾಂಕ್ರಾಮಿಕಯಿಂದಾಗಿ ಪ್ರತಿ ಹಳ್ಳಿಗಳು ನಲುಗುತ್ತಿವೆ. ಬಹುತೇಕ ಮನೆಮನೆಗಳಲ್ಲಿ ನೆಗಡಿ ಕೆಮ್ಮು ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಜನತೆಗೆ ಭರವಸೆಯ ಆತ್ಮವಿಶ್ವಾಸವನ್ನು, ಮುನ್ನೆಚ್ಚರಿಕೆಯನ್ನು, ಜಾಗೃತಿಯನ್ನು ಆಶಾ ಕಾರ್ಯಕರ್ತೆಯರು ಮೂಡಿಸಿದರು..
ಅಸುರಕ್ಷತೆಗಳ ನಡುವೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಐಎಲ್‌ಐ ಮತ್ತು ಎಸ್‌ಎಆರ್‌ಐ ಸರ್ವೆ (ವಲ್ನೆರಬಲ್ ಸರ್ವೆ), ಮಾತ್ರೆ ಹಂಚುವುದು, ಕೊವಿಡ್ ಕಿಟ್ ಹಂಚುವುದು, ಸೋಂಕಿನ ಲಕ್ಷಣ ಕಂಡಲ್ಲಿ ಪರೀಕ್ಷೆಗೆ ಕಳುಹಿಸಿರುವುದು, ಮನೆಗಳಿಗೆ ಹೋಗಿ ದಿನನಿತ್ಯ ಅವರ ಆರೋಗ್ಯದ ಮಾಹಿತಿಯನ್ನು (ಅಪ್ಡೇಟ್)ಇಲಾಖೆಗೆ ಒದಗಿಸುವುದು, ಒಂದನೆ-ಎರಡನೇ ಸಂಪರ್ಕಿತರನ್ನು ಗುರುತಿಸುವುದು ಸೇರಿದಂತೆ ವಿವಿಧ ಕಾರ್ಯದಲ್ಲಿ ತೊಡಗಿರುವರು. ಕೆಲವೆಡೆ ಇವರಿಗೆ ನಿಯೋಜಿಸಿದ ಕಾರ್ಯಗಳನ್ನು ಹೊರತು ಪಡಿಸಿ ಆಶಾಗಳಿಂದ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದು. ಅಂದರೆ ಸ್ವಾಬ್ ತೆಗೆಯುವುದು, ವಿವಿಧ ಲಸಿಕಾ ಕೇಂದ್ರದಲ್ಲಿ ಶಿಫ್ಟ್ ಪ್ರಕಾರ ಕೆಲಸ ಹೀಗೆ ವಿವಿಧ ಕೆಲಸಗಳಿಗೆ ಒತ್ತಾಯಿಸುವರು. ಮಾಡಲು ಆಗುವುದಿಲ್ಲವೆಂದರೆ ಕೆಲಸ ಬಿಟ್ಟುಬಿಡಿ ಅಥವಾ ಈ ತಿಂಗಳ ವೇತನ ಮಾಡುವುದಿಲ್ಲವೆಂದು ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುತ್ತಿರುವರು. ಒಟ್ಟಾರೆ ಆಶಾ ಕಾರ್ಯಕರ್ತೆಯರ ಸೇವೆ ಅತ್ಯಮೂಲ್ಯವಾಗಿದೆ ಎಂದು ಸರ್ಕಾರದ ಗಮನಸೆಳೆದರು.
ಆಶಾ ಕಾರ್ಯಕರ್ತೆಯರಿಗೆ ಕಳೆದ 2 ತಿಂಗಳ ಮತ್ತು ಮೇ ತಿಂಗಳು ಸೇರಿದರೆ 3 ತಿಂಗಳಿಂದ ವೇತನ ನೀಡದೆ ಇಲಾಖೆಯು ಆಶಾಗಳನ್ನು ಈ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ತಳ್ಳಿರುವುದನ್ನು ಖಂಡಿಸಿದರು,
ಆಶಾಗಳಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ಕೊಡದ ಇಲಾಖೆಯ ಅಮಾನವೀಯ ನಡೆ ವಿರುದ್ಧ, ಹಾಗೂ ಪ್ರತಿ ಜಿಲ್ಲೆಯಲ್ಲಿ 20 ರಿಂದ 40 ಜನ ಆಶಾ ಕಾರ್ಯಕರ್ತೆಯರು ಸೋಂಕಿಗೋಳಗಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅವರ ಕುಟುಂಬವನ್ನು ಸಶಕ್ತಗೊಳಿಸಲು ಪ್ರತಿ ಆಶಾ ಕಾರ್ಯಕರ್ತೆಯರಿಗೆ ರೂ. 25,000 ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿಯ ವಿಶೇಷ ಸೇವೆಗೆಂದು ಇತರ ಎಲ್ಲಾ ಕೊರನಾ ವಾರಿಯರ್ಸ್ಗಳಿಗೆ ಆರೋಗ್ಯ ಇಲಾಖೆಯಲ್ಲಿ ಮಾಸಿಕ 5000 ರೂಪಾಯಿ ವಿಶೇಷ ಭತ್ಯೆ(ರಿಸ್ಕ್ ಅಲೋಯನ್ಸ್) ನೀಡಿದಂತೆ ಆಶಾ ಕಾರ್ಯಕರ್ತೆರಿಗೂ ನೀಡುವಂತೆ ಒತ್ತಾಯಿಸಿದರು.
ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಮತ್ತು ಈಗ ಕೋವಿಡ್‌ಯಿಂದ ಸಾವಿಗೀಡಾದ ಕುಟುಂಬಕ್ಕೆ ಘೋಷಣೆಯಾದ 50 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿದರು.
ರಾಜ್ಯ ಸರ್ಕಾರವು ಕೂಡಲೇ ಮುಂಚೂಣಿಯಲ್ಲಿದ್ದು ಹೊರಡುತ್ತಿರುವ ವಾರಿಯರ್ಸ್ ಬಗ್ಗೆ ಸಕಲ ಕಾಳಜಿ ಮುತುವರ್ಜಿ ವಹಿಸಿ ಸಂಘವು ಪ್ರಸ್ತಾಪಿಸಿರುವ ಈ ಎಲ್ಲಾ ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಆಗ್ರಹಿಸಲಾಯಿತು.
ರಾಜ್ಯದಲ್ಲಿ ಸಾವಿರಾರು ಜನರು ಸೋಂಕಿಗೆ ಒಳಗಾಗಿದ್ದರೂ, ಹಲವಾರು ಜನ ಪ್ರಾಣ ಕಳೆದುಕೊಂಡಿದ್ದರೂ, ಕುಟುಂಬದ ಸದಸ್ಯರು ಅಪಾಯಕ್ಕೆ ಸಿಲುಕಿದ್ದರೂ ಲೆಕ್ಕಿಸದೆ ಎದೆಗುಂದದೆ ನಿತ್ಯವೂ ಯಮರಾಜನ ವಿರುದ್ಧ ಸೆಣಸುತ್ತಿರುವ ಈ ಮಾತೃ ಹೃದಯೀ ಕೊರೋನಾ ವಾರಿಯರ್ಸ್ ಗೆ ಸರ್ಕಾರವು ಪರಿಹಾರವನ್ನು ನೀಡಿ ಅವರ ಸೇವೆಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಸರ್ಕಾರದ ಗಮನಸೆಳೆದರು.