ಬೆಂಗಳೂರು: ಬಿಎಸ್‌ವೈ ಆಪ್ತರಾಗಿದ್ದ ಎನ್.ಆರ್.ಸಂತೋಷ್ ಬಿಜೆಪಿಗೆ ಗುಡ್ ಬೈ ಹೇಳ್ತಾರ? ಇಂಥದ್ದೊಂದು ಚರ್ಚೆ ಬಿಜೆಪಿ ಕಚೇರಿಯ ಮೊಗಸಾಲೆಯಲ್ಲಿ ನಡೆದಿದೆ.
ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್.ಆರ್.ಸಂತೋಷ್, ಬದಲಾದ ಪರಿಸ್ಥಿತಿಯಲ್ಲಿ ಬಿ.ವೈ.ವಿಜಯೇಂದ್ರ ಬಗ್ಗೆ ಮುನಿಸಿಕೊಂಡು ಬಿಎಸ್‌ವೈ ಪಾಳಯದಿಂದ ದೂರ ಉಳಿದಿದ್ದರು. ಬಳಿಕ ಬಹುಪಾಲು ಸಮಯವನ್ನು ಅರಸೀಕೆರೆಯಲ್ಲಿ ಕಳೆದಿರುವ ಎನ್.ಆರ್.ಸಂತೋಷ್, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿಯಲ್ಲಿ ತೊಡಗಿದ್ದರು. ಅರಸೀಕೆರೆ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸಿದ್ದತೆ ನಡೆಸಿರುವ ಅವರು ಬಹುಕಾಲದಿಂದಲೇ ಪ್ರಚಾರ ಕೈಗೊಂಡಿದ್ದರು. ಆದರೆ ಟಿಕೆಟ್ ಸಿಕ್ಕಿಲ್ಲ.
ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ದತೆಗಳನ್ನು ನಡೆಸಿದ್ದರೂ, ಅವರು ಭಾರೀ ಪ್ರಚಾರ ಕೈಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಯೂ ಅದರ ಸಂತೋಷ್, ಅರಸೀಕೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ತೀವ್ರ ಲಾಭಿ ನಡೆಸಿ ವಿಫಲವಾಗಿರುವ ಸಂತೋಷ್ ಇದೀಗ ಜೆಡಿಎಸ್‌ನತ್ತ ಮುಖ ಮಾಡಿದಂತಿದೆ. ಈ ಸಂಬಂಧ ಕುಟುಂಬ ಸದಸ್ಯರು, ಕಾರ್ಯಕರ್ತರ ಸಭೆ ನಡೆಸಿರುವ ಸಂತೋಷ್, ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿದ್ದಾರೆ. ಈಗೀಗಲೇ ಕ್ಷೇತ್ರಾದ್ಯಂತ ಓಡಾಡಿ ಚುನಾವಣೆಗೆ ಸಿದ್ಧತೆ ನಡೆಸಿದ್ದು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿಕೊಂಡಿದ್ದಾರಂತೆ.
ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಶಗೊಂಡಿರುವ ಸಂತೋಷ್ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ಜೆಡಿಎಸ್ ಪಕ್ಷ ಸೇರುವ ಬಗ್ಗೆಯೂ ಅವರ ಪಾಳಯದಲ್ಲಿ ಮಾತುಗಳು ಹರಿದಾಡುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಶಿವಲಿಂಗೇಗೌಡರು ಇದೀಗ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಜೆಡಿಎಸ್ ಒಪ್ಪಿಕೊಂಡರೆ ಸಂತೋಷ್ ಅವರು ದೇವೇಗೌಡರ ಪಕ್ಷವನ್ನು ಅಪ್ಪಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಗೊಂದು ವೇಳೆ ಬೆಳವಣಿಗೆಗಳು ನಡೆದರೆ ಎನ್.ಆರ್.ಸಂತೋಷ್ ಅವರು ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.
























































