ಮಂಗಳೂರು: ಪುರಾಣ ಪ್ರಸಿದ್ಧ ಶ್ರೀ ಕಟೀಲು ಕ್ಷೇತ್ರದಲ್ಲಿ ಇದೀಗ ವೈಭವದ ಜಾತ್ರಾ ಮಹೋತ್ಸವದ ಸಡಗರ ಆವರಿಸಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ. ಕಟೀಲು ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲೇ ಕರಾವಳಿಯ ಯುವಜನ ಸಮೂಹ ಶ್ರೀ ದುರ್ಗಾಪರಮೇಶ್ವರಿಯ ಮಹಿಮೆಯ ಬಗ್ಗೆ ಬೆಳಕು ಚೆಲ್ಲುವ ಹಾಡೊಂದನ್ನು ಲೋಕಾರ್ಪಣೆ ಮಾಡಿ ಗಮನಸೆಳೆದಿದ್ದಾರೆ. ಈ ಭಕ್ತಿ ಗಾನಕ್ಕೆ ಆಸ್ತಿಕರ ಪಾಳಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೆ ಪ್ರಯುಕ್ತ ದೇವಲೋಕ ಕ್ರಿಯೇಷನ್ಸ್ ವತಿಯಿಂದ ‘ಅಪ್ಪೆ ಭ್ರಾಮರಿಯೇ’ ಎಂಬ ಹೊಸ ಭಕ್ತಿಗೀತೆಯನ್ನು ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಗಿದೆ. ಜ್ಯೋತಿಗುಡ್ಡೆ ಕ್ಷೇತ್ರದ ಅರ್ಚಕಿ ಗುಲಾಬಿ ಅಮ್ಮನವರು ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿದರು.
ಸಾಫಲ್ಯ ಸೇವಾ ಸಂಘ (ರಿ) ಮುಂಬೈ ಇದರ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ಮತ್ತು ರತಿಕಾ ಎಸ್. ಸಪಲ್ಯ ಅವರು ನಿರ್ಮಾಣದಲ್ಲಿ ಸೊಗಸಾಗಿ ಮೂಡಿಬಂದಿರುವ ‘ಅಪ್ಪೆ ಭ್ರಾಮರಿಯೇ’ ಭಕ್ತಿ ಗಾಯನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಮಹಿಮೆಯನ್ನು ಹೊಗಳಲಾಗಿದೆ. ಭಕ್ತಿಗಾಯನ ಸಾಹಿತ್ಯದಲ್ಲಿ ಹೆಸರಾಗಿರುವ ದೇವಿಪ್ರಸಾದ್ ಎಂ. ದೇವಂದಬೆಟ್ಟು ಅವರು ಈ ಹಾಡನ್ನು ಬರೆದಿದ್ದಾರೆ. ದೇವಿಪ್ರಸಾದ್ ಎಂ. ದೇವಂದಬೆಟ್ಟು ಅವರು ಸಾಹಿತ್ಯದಲ್ಲಿ ಮೂಡಿಬಂದ 10ನೇ ಗೀತೆ ಇದಾಗಿದ್ದು, ಅವರೇ ಗಾಯಕರಾಗಿ, ನಿರ್ದೇಶಕರಾಗಿ, ಅಭಿನಯ ಮೂಲಕವೂ ಕೌಶಲ್ಯ ಪ್ರದರ್ಶಿಸಿದ್ದಾರೆ.
ಆಸ್ತಿಕರನ್ನು ಮೋಡಿ ಮಾಡಿದ ಕಲಾತಂಡ:
ಸೌಮ್ಯ ಕೆ.ವಿ. ಕಲ್ಲೇಗ ಪುತ್ತೂರು ಇವರ ಕಂಠಸಿರಿಯಲ್ಲಿ ಮೂಡಿಬಂದ ಈ ಭಕ್ತಿಗೀತೆಗೆ ತೃಪ್ತಿ ಕೆ.ವಿ. ಜಾರಂದಗುಡ್ಡೆ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಅವರೂ ಅಭಿನಯ ಮಾಡಿದ್ದೂ, ಇವರಿಗೆ ಪೂರ್ಣಿಮಾ ಜಾರಂದಗುಡ್ಡೆ ನೃತ್ಯಸಂಯೋಜನೆಯ ಸಾಥ್ ನೀಡಿದ್ದಾರೆ. ಧನ್ಯ, ಸಾನ್ವಿ, ವರ್ಣಿತ, ವಿನುತಾ, ಆಯುಷ್, ಚಾರ್ವಿ, ಮೋಹಿತಾ, ಪ್ರಥಮ್, ಮೋಕ್ಷಾ, ಮನ್ವಿತ್, ರಿನಿಶ್, ಪ್ರಣಿಶ್, ವಿದ್ವಿ, ಜಾನ್ವಿತ್, ಶ್ರೀತೇಜ್, ಧ್ರುವಂತ್, ಹಿತೈಷಿ, ಪ್ರಣಿತ ಮೊದಲಾದವರ ಸಾಂಗತ್ಯವೂ ಆಕರ್ಷಣೆ ತುಂಬಿದೆ.
ಬಿ.ಸಿ.ರೋಡು ಕೈಕಂಬದ ಗ್ಲ್ಯಾಡ್ ಆಡಿಯೋ ರೆಕಾರ್ಡಿಂಗ್ ಸ್ಟುಡಿಯೋದಲ್ಲಿನ ಧ್ವನಿಮುದ್ರಣ, ಸ್ವಸ್ತಿಕ್ ಕುಲಾಲ್ ಕನಪಾಡಿ ಅವರ ವೀಡಿಯೋಗ್ರಫಿ ಕೈಚಳಕ, ಹರ್ಷಿತ್ ಕನಪಾಡಿ ಮಾರ್ಗದರ್ಶನ, ಅವಿನಾಶ್ ಪೂಜಾರಿಯ ವೀಡಿಯೋ ಸಂಕಲನ ಕೂಡಾ ಆಸ್ತಿಕರನ್ನು ಮೋಡಿಮಾಡಿದಂತಿದೆ. ಚರಣ್ ರಾಜ್ ಪಚ್ಚಿನಡ್ಕ ಪ್ರಸಾದನ, ನಿಶಾಂತ್ ಕಿನ್ನಿಗೋಳಿ, ಪ್ರಿಯದರ್ಶಿನಿ ಸುನೀಲ್ ಅಂಬಿಕಾನಗರ ಬಜಪೆ, ಪ್ರವೀಣ್ ಎಂ.ಎಸ್. ಬಳ್ಳಾಲ್ ಭಾಗ್, ಗುರುದೀಪ್ ಸಾಲ್ಯಾನ್ ದೇವಂದಬೆಟ್ಟು, ಶಿವರಾಜ್ ಜಾರಂದಗುಡ್ಡೆ, ಸಮೀರ್ ಪರ್ಲಿಯಾ ಅವರ ಪ್ರಯತ್ನಕ್ಕೆ ಕಟೀಲು ದೇವಸ್ಥಾನ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ್ದರಿಂದ ಭಕ್ತ ಸಮೂಹಕ್ಕೆ ಸುಂದರ ಹಾಡೊಂದನ್ನು ಸಮರ್ಪಿಸಲು ಸಾಧ್ಯವಾಯಿತು ಎಂದು ದೇವಿಪ್ರಸಾದ್ ಎಂ. ದೇವಂದಬೆಟ್ಟು ತಿಳಿಸಿದ್ದಾರೆ.
ಭಕ್ತಿಗೀತೆ ಬಿಡುಗಡೆ ಸಂದರ್ಭದಲ್ಲಿ ‘ಅಪ್ಪೆ ಭ್ರಾಮರಿಯೇ’ ತಂಡದ ಜೊತೆ ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷ ಪುರುಷೋತ್ತಮ ಮಾಡಂಗೆ, ಉದಯಕುಮಾರ್ ಜ್ಯೋತಿಗುಡ್ಡೆ, ಸಂದೇಶ್ ದರಿಬಾಗಿಲು, ಗಾಯಕಿ ಸೌಮ್ಯ ಕೆ.ವಿ. ಕಲ್ಲೇಗ, ನೃತ್ಯ ಸಂಯೋಜಕಿ ತೃಪ್ತಿ ಕೆ.ವಿ. ಜಾರಂದಗುಡ್ಡೆ, ದೀಪಕ್ ಜಾರಂದಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.