ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಜೀ ಅವರು ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಇದೇ ಸಂದರ್ಭದಲ್ಲಿ ನಾಯಕರ ಸಭೆ ನಡೆಸುವ ಮೂಲಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇದಕ್ಕೂ ಮುನ್ನ ಅಮಿತ್ ಶಾ ಕಾರ್ಯಕ್ರಮಗಳ ಬಗ್ಗೆ ಮೈಸೂರಿನಲ್ಲು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಧ್ಯಾಹ್ನ ಕೋರ್ ಕಮಿಟಿ ಮೀಟಿಂಗ್ ನಂತರ ಖಾಸಗಿ ಹೋಟೆಲ್ನಲ್ಲಿ ನಡೆಯುವ 4 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಮೈಸೂರು ಕ್ಲಸ್ಟರ್ನ ಪ್ರಮುಖರ ಸಭೆಯಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ ಎಂದರು.
ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರಮುಖರ ಸಭೆ ಕರೆದಿದ್ದೇವೆ. 4 ಲೋಕಸಭಾ ಕ್ಷೇತ್ರಗಳ 100-120 ಪ್ರಮುಖರು ಆ ಸಭೆಯಲ್ಲಿ ಭಾಗವಹಿಸುತ್ತಾರೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯತಂತ್ರ ಹೇಗಿರಬೇಕು, ಬಿಜೆಪಿ- ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ತಳಹಂತದಲ್ಲಿ ಕಾರ್ಯಕರ್ತರ ಮಧ್ಯೆ ಸಮಸ್ಯೆ ಇಲ್ಲದೇ ಚುನಾವಣೆ ಎದುರಿಸಬೇಕಿದೆ. ಈ ನಿಟ್ಟಿನಲ್ಲೂ ಚರ್ಚೆಗಳು ಆಗಲಿವೆ ಎಂದು ತಿಳಿಸಿದರು.
ಪ್ರತಿಯೊಂದು ಕ್ಷೇತ್ರವನ್ನೂ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಿದ್ದೇವೆ. ಚುನಾವಣಾ ಚಾಣಕ್ಯ ಎಂದು ಪ್ರಖ್ಯಾತಿ ಪಡೆದ ಅಮಿತ್ ಶಾ ಜೀ ಅವರ ಸಲಹೆಗಳನ್ನೂ ಪಡೆಯಲಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಬಿಜೆಪಿ- ಜೆಡಿಎಸ್ 28 ಕ್ಷೇತ್ರಗಳಲ್ಲೂ ಗೆಲ್ಲುವ ಕಾರ್ಯತಂತ್ರ ರೂಪಿಸುತ್ತೇವೆ. ಇದು ಮುಖ್ಯಮಂತ್ರಿಗಳ ತವರೂರು ಎನ್ನುವುದಕ್ಕಿಂತ ಬಿಜೆಪಿ ಭದ್ರಕೋಟೆಯೂ ಹೌದು. ಪ್ರತಿ ಚುನಾವಣೆಯಲ್ಲೂ ಇಲ್ಲಿನ ಜನತೆ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಿರಿಯರಾದ ಶ್ರೀನಿವಾಸ ಪ್ರಸಾದ್ ಜೀ ಅವರು ರಾಜಕೀಯ ನಿವೃತ್ತಿ ಘೋಷಿಸಿರುವ ಈ ಸಂದರ್ಭದಲ್ಲಿ ಸೂಕ್ತ ಅಭ್ಯರ್ಥಿ ಹುಡುಕಿ ಗೆಲ್ಲುವ ಕಾರ್ಯತಂತ್ರ ರೂಪಿಸುತ್ತೇವೆ ಎಂದು ತಿಳಿಸಿದರು.