ಉಡುಪಿ: ಸಾಮಾಜಿಕ ಕೈಂಕರ್ಯದಲ್ಲಿ ಮಾದರಿ ಎಂಬಂತಿರುವ ಡಾ.ಗೋವಿಂದ ಬಾಬು ಪೂಜಾರಿ ಅವರು ಇದೀಗ ಮತ್ತೊಂದು ಸೇವೆ ಮೂಲಕ ಗಮನಸೆಳೆದಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ವಿಚಾರದತ್ತಲೂ ಚಿತ್ತ ಹರಿಸಿರುವ ಉದ್ಯಮಿಯೂ ಆದ ಡಾ.ಗೋವಿಂದ ಪೂಜಾರಿಯವರು, ಪ್ರಸ್ತುತ ಆರೋಗ್ಯ ಇಲಾಖೆಯ ಸಿಬ್ಬಂದಿ ವೇತನ ಹಾಗೂ ಇನ್ನಿತರ ಖರ್ಚುಗಳನ್ನು ಭರಿಸಲು ನಿರ್ಧರಿಸಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ವಾಹನಕ್ಕೆ ಸರಕಾರದಿಂದ ಸಿಬ್ಬಂದಿ ನೇಮಕವಾಗುವ ತನಕ ತಾತ್ಕಾಲಿಕವಾಗಿ ನೇಮಿಸುವ ಓರ್ವ ಚಾಲಕನ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಕನಿಷ್ಠ ಡಿಸೇಲ್ ವೆಚ್ಚವನ್ನು ಭರಿಸಲು ಗೋವಿಂದ ಬಾಬು ಪೂಜಾರಿ ನಿರ್ಧರಿಸಿದ್ದಾರೆ.
ನಿರಂತರ ಸಾಮಾಜಿಕ ಸೇವೆ..
ರಾಜಕಾರಣಿಗಳನ್ನು ನಾಚಿಸುವಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಗೋವಿಂದ ಬಾಬು ಪೂಜಾರಿಯವರು, ಕೆಲವು ವರ್ಷಗಳಿಂದೀಚೆಗೆ ರಾಜ್ಯದ ವಿವಿಧೆಡೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಬಿರುಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಅನೇಕ ಹಳ್ಳಿಗಳಿಗೆ ಜೀವಜಲ ಹರಿಸಿದ ‘ಆಧುನಿಕ ಭಗೀರಥ’ನೆನಿಸಿದ್ದಾರೆ.
ಬೆಂಗಳೂರಿನಲ್ಲಿ ಸ್ವಚ್ಚತೆಗಾಗಿ ದುಡಿಯುತ್ತಿರುವ ಸಾವಿರಾರು ಮಂದಿಗೆ ಅನ್ನ, ಆಹಾರ, ಆರೋಗ್ಯ ಭಾಗ್ಯದ ನೆರವು ನೀಡುತ್ತಿರುವ ಇವರು, ಸಾವಿರಾರು ಮಂದಿಗೆ ಶಿಕ್ಷಣ ನೆರವು, ವೈದ್ಯಕೀಯ ನೆರವು ನೀಡುವ ಮೂಲಕ ಸಾಮಾಜಿಕ ಕಳಕಳಿಯ ವಿಶೇಷ ವ್ಯಕ್ತಿಯಾಗಿ ಗಮನಸೆಳೆದಿದ್ದಾರೆ. ಗೋವಿಂದ ಬಾಬು ಪೂಜಾರಿಯವರ ಈ ನಿರಂತರ ಸಾಮಾಜ ಸೇವೆಯನ್ನು ಗಮನಿಸಿದ ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು ಕೂಡಾ ಗಮನಾರ್ಹ.