ಮಂಗಳೂರು: ಬಂದರು ನಗರಿ ಮಂಗಳೂರು ಮಂಗಳವಾರ ಇಬ್ಬರು ಖಾಕಿ ಚಾಣಕ್ಯರ ಕಸರತ್ತಿಗೆ ಸಾಕ್ಷಿಯಾಯಿತು. ವಿಧಾನಸಭಾ ಚುನಾವಣೆಯು ಭದ್ರತೆಗೆ ಸವಾಲಾಗಿರುವಂತೆಯೇ ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಭದ್ರತಾ ಕಸರತ್ತು ಕೈಗೊಂಡ ಖಡಕ್ ಅಧಿಕಾರಿ ಅಲೋಕ್ ಕುಮಾರ್ ಹಾಗೂ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಪಾತಕ ಲೋಕಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ಮಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಸಶಸ್ತ್ರ ಪಡೆ ಸಿಬ್ಬಂದಿ ಜೊತೆ ಪಥ ಸಂಚಲನ ಕೈಗೊಂಡ ಈ ಅಧಿಕಾರಿಗಳು ಶಾಂತಿಯುತ ಚುನಾವಣೆಗೆ ಯಾವುದೇ ಶಕ್ತಿ ಅಡ್ಡಿಯಾಗದು ಎಂಬ ಸಂದೇಶವನ್ನು ನೀಡಿದರು.
ಅಲೋಕ್ ಖಡಕ್ ನಡೆ..
ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾಸು) ಅಲೋಕ್ ಕುಮಾರ್ ಅವರು ಮಂಗಳೂರಿನಲ್ಲಿ ಬೀಡು ಬಿಟ್ಟು ಪರಿಸ್ಥಿತಿ ಅವಲೋಕಿಸಿದ್ದಾರೆ. ಮಂಗಳವಾರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಕರಾವಳಿಯಲ್ಲಿ ಸವಾಲಾಗಿರುವ ಪಾತಕಿಗಳನ್ನು ಕಟ್ಟಿಹಾಕುವ ಸಂಬಂಧ ಕಸರತ್ತು ನಡೆಸಿದರು.
ರೌಡಿ ನಿಗ್ರಹ ವಿಚಾರದಲ್ಲಿನ ಖಡಕ್ ನಿಲುವಿನಿಂದಾಗಿ ನಿಷ್ಟೂರ ಅಧಿಕಾರಿ ಎಂದೇ ಬಿಂಬಿತವಾಗಿರುವ ಅಲೋಕ್ ಕುಮಾರ್ ಅವರು, ಸಂಚಾರ ಮಾಂತ್ರಿಕ ಐಪಿಎಸ್ ಖ್ಯಾತಿಯ ಮಂಗಳೂರು ಕಮೀಷನರ್ ಕುಲದೀಪ್ ಕುಮಾರ್ ಜೈನ್ ಜೊತೆ ಬೀದಿಗಿಳಿದದ್ದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಯಿತು.
ಕೆಲ ವರ್ಷಗಳ ಹಿಂದೆ ಸಿಎಎ ಜಾರಿ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಮಂಗಳೂರು ಇಡೀ ದೇಶದಲ್ಲೇ ಸುದ್ದಿಯ ಕೇಂದ್ರಬಿಂದುವಾಗಿತ್ತು. ಅನಂತರದ ಮೊದಲ ಚುನಾವಣೆ ಇದಾಗಿರುವುದರಿಂದಾಗಿ ಈ ಇಬ್ಬರು ಜೋಡಿ ಐಪಿಎಸ್‌ಗಳು ತಮ್ಮದೇ ಶೈಲಿಯಲ್ಲಿ ಭದ್ರತಾ ಅಖಾದಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಹೀಗಿದೆ ಭದ್ರತಾ ವ್ಯೂಹ..
ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರಾವಳಿಯ ಕೇಂದ್ರ ಭಾಗ ಹಾಗೂ ಸೂಕ್ಷ್ಮ ಪ್ರದೇಶದಲ್ಲಿನ ಭದ್ರತೆಗಾಗಿ ವಿಶೇಷ ತಂಡಗಳನ್ನು ರಚಿಸಲು ತೀರ್ಮಾನಿಸಲಾಯಿತು.
ಚುನಾವಣಾ ಪ್ರಕ್ರಿಯೆ ಮುಗಿಯುವ ವರೆಗೂ ಚೆಕ್ ಪೋಸ್ಟ್ ಮತ್ತಿತರ ಕಡೆ ನಿಗಾವಹಿಸಲು ಕಾರ್ಯಪಡೆಯನ್ನು ಸಜ್ಜುಗೊಳಿಸಲು ನಿರ್ದೇಶನ ನೀಡಲಾಯಿತು.
ಸಾಕಷ್ಟು ಪ್ರಮಾಣದಲ್ಲಿ ಸಶಸ್ತ್ರ ಪಡೆಯನ್ನು ಬಳಕೆ ಮಾಡಲು ನಿರ್ಧರಿಸಲಾಯಿತು.
ಸಭೆಯ ಬಳಿಕ ವಿವಿಧ ಪೊಲೀಸ್ ತಂಡಗಳ ಮೂಲಕ ಮಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದ ಪೊಲೀಸರು, ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಿದರು. ಸ್ವತಃ ಅಲೋಕ್ ಕುಮಾರ್ ಹಾಗೂ ಕುಲದೀಪ್ ಕುಮಾರ್ ಜೈನ್ ಅವರೂ ಪಥಸಂಚಲನದಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಕೇಂದ್ರೀಕರಿಸಿದರು.
ಬಂದರು ನಗರಿಯ ಕೇಂದ್ರ ಸ್ಥಾನ ನೆಹರೂ ಮೈದಾನದಿಂದ ಆರಂಭಗೊಂಡ ಈ ಪಥಸಂಚಲನ ಹ್ಯಾಮಿಲ್ಟನ್ ಸರ್ಕಲ್, ರಾವ್ ಆ್ಯಂಡ್ ರಾವ್ ಸರ್ಕಲ್, ಕ್ಲಾಕ್ ಟವರ್, ಕೆ.ಎಸ್.ರಾವ್ ರಸ್ತೆ ಮೂಲಕ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಸಾಗಿತು. ಸಿಆರ್‌ಪಿಎಫ್, ಸಿಐಎಸ್‌ಎಫ್, ಸಿಎಆರ್, ವಿವಿಧ ಠಾಣೆಗಳ ಪೊಲೀಸರು ಸೇರಿದಂತೆ 280 ಮಂದಿ ಅಧಿಕಾರಿ, ಸಿಬಂದಿ ಈ ಕಸರತ್ತಿನಲ್ಲಿ ಭಾಗಿಯಾದರು.
























































