ಬೆಂಗಳೂರು: ಹತ್ತಾರು ಕಥೆಗಳನ್ನು ಹೇಳುತ್ತಾ, ಕಲ್ಪನೆಯ ಲೋಕದಲ್ಲಿ ತೇಲುವಂತೆ ಮಾಡುತ್ತವೆ ಸಿನಿಮಾಗಳು. ಇಲ್ಲೊಂದು ಹೊಸ ಚಿತ್ರ ಮನುಕುಲಕ್ಕೆ ಅಪರೂಪದ ಸಂದೇಶವನ್ನು ಹೊತ್ತು ಬರುವಂತಿದೆ. ಅದಕ್ಕೆ ಸಾಕ್ಷಿ ಎಂಬಂತಿದೆ ಇದೀಗ ಬಿಡುಗಡೆಯಾಗಿರುವ ಈ ವೀಡಿಯೋ ಸಾಂಗ್.
‘ಅಕ್ಷಿ..’ ತೆರೆಕಾಣುವ ಮೊದಲೇ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾವಿದು. ಕಲಾದೇಗುಲ ಶ್ರೀನಿವಾಸ್ ಅವರ ಕನಸಿನ ಕೂಸಾಗಿರುವ ಈ ಸಿನಿಮಾ ಕೊರೋನಾ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಕುತೂಹಲದ ಕೇಂದ್ರಬಿಂದುವಾಗಿತ್ತು. ‘ದೃಷ್ಟಿಯಿಲ್ಲದಿದ್ದರೆ ಜಗತ್ತು ಕತ್ತಲು’ ಎಂಬ ಕಹಿ ಸತ್ಯದ ಜೊತೆ ಅಂಧಕಾರ ತೊಲಗಿಸುವ ಸೂತ್ರವನ್ನು ಇದರ ಕಥೆ ಹೊಂದಿದೆ.
ಕೆಲವು ದಿನಗಳಿಂದೀಚೆಗೆ ಪುನೀತ್ ರಾಜ್‌ಕುಮಾರ್ ಅವರು ನೇತ್ರದಾನ ಮೂಲಕ ಹತ್ತು ಜನರಿಗೆ ಬೆಳಕಾದ ಸುದ್ದಿ ಎಲ್ಲರ ಗಮನಕೇಂದ್ರೀಕರಿಸಿದೆ. ಇದಕ್ಕೂ ಮುನ್ನವೇ ಅಜ್ಞಾನದ ಅಂಧಕಾರ ತೊಲಗಿಸುವ ಕಥೆಯನ್ನು ಹೆಣೆದಿರುವ ಚಿತ್ರ ‘ಅಕ್ಷಿ’ ಸಿದ್ದವಾಗಿತ್ತು ಎಂಬುದು ಗಮನಾರ್ಹ. ಬಿಡುಗಡೆಯ ದಿನವನ್ನೂ ಈ ‘ಅಕ್ಷಿ’ ಎದುರು ನೋಡುತ್ತಿತ್ತು. ಇದೀಗ ‘ಅಕ್ಷಿ’ಯ ಮತ್ತೊಂದು ಹಾಡಿನ ಅಧ್ಯಾಯವು ಸಿನಿರಸಿಕರ ಚಿತ್ತಕೇಂದ್ರೀಕರಿಸಿದೆ. ಕೇಳುಗರಿಂದ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.