ಲಂಡನ್: ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ಮತ್ತು ವಿಜಯ ಘೋರ್ಪಡೆ ದಂಪತಿ ಲಂಡನ್‌ನಲ್ಲಿ ಶ್ರೀ ಬಸವೇಶ್ವರ ವಿಗ್ರಹ ಸ್ಥಳಕ್ಕೆ ಭೇಟಿ ಕನ್ನಡಿಗರ ಜೊತೆ ಸಮಾಲೋಚನೆ ನಡೆಸಿ ಗಮನಸೆಳೆದರು. ಬ್ರಿಟಿಷ್ ಇಂಡಿಯನ್ ಮತ್ತು ಕನ್ನಡ ಸಮುದಾಯದ ಸದಸ್ಯರು ಕೂಡ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಲ್ಯಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಪೂಜಾ ಗಾಂಧಿ ದಂಪತಿಯನ್ನು ಅಭಿನಂದಿಸಿದರು. ‘ಕನ್ನಡಿಗರು UK’ ಅಧ್ಯಕ್ಷ ಗಣಪತಿ ಭಟ್, ಯುಕೆ ಮೂಲದ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿಜಿತ್ ಸಲೀಮತ್, ಮಿರ್ಗಿ ರಂಗನಾಥ್ ಮತ್ತು ಶರಣ್ ಭೇಮಳ್ಳಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವೇಶ್ವರರಿಗೆ ಗೌರವ ಸಮರ್ಪಿಸಿದ ನಟಿ ಪೂಜಾ ಗಾಂಧಿ, 12ನೇ ಶತಮಾನದಲ್ಲಿ ಬಸವಣ್ಣನವರು ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ಭೇದದ ವಿರುದ್ಧ ನಡೆಸಿದ ಹೋರಾಟವನ್ನು ನೆನಪಿಸಿದರು. ಬಸವಣ್ಣರ ತತ್ವಗಳನ್ನು ಮೆಚ್ಚುವ ತಾವು ಬಸವಣ್ಣನ ಬೋಧನೆಗಳನ್ನು ತಮ್ಮ ಜೀವನದ ಪ್ರಮುಖ ಅಂಶವೆಂದು ಪರಿಗಣಿಸಿರುವುದಾಗಿ ಪೂಜಾ ಗಾಂಧಿ ಹೇಳಿದರು.
ಲಂಡನ್‌ನಲ್ಲಿರುವ ಇತಿಹಾಸ ಪ್ರಸಿದ್ಧ ಬಸವೇಶ್ವರ ಪ್ರತಿಮೆ, 2015ರ ನವೆಂಬರ್ 14ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಅನಾವರಣಗೊಂಡಿತ್ತು. ಇದು ಯುಕೆ ಶಿಲ್ಪ ಪ್ರತಿಮೆಗಳ ಕಾಯ್ದೆಯ 1854ರ ನಿಯಮಗಳಡಿ ಬ್ರಿಟಿಷ್ ಕ್ಯಾಬಿನೆಟ್‌ನಿಂದ ಮಾನ್ಯತೆ ಪಡೆದ ಕೆಲವು ಮೌಲಿಕ ಶಿಲ್ಪಗಳಲ್ಲಿ ಒಂದಾಗಿದೆ. ಹಿಂದೆ, 2023ರ ಮಾರ್ಚ್ 5ರಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಸವೇಶ್ವರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ್ದರು. ಕರ್ನಾಟಕದ ಅನೇಕ ಗಣ್ಯರು, ನಾಯಕರು, ಯತಿಗಳು, ಸಾಮಾಜಿಕ ಹರಿಕಾರರೂ ಲಾಂಬೆತ್ ಬಸವೇಶ್ವರ ಪ್ರತಿಮೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.