ಮಳವಳ್ಳಿ: ಚಾಲೆಂಚಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರವಾಗಿ ಮತ ಪ್ರಚಾರ ನಡೆಸಿದರು.
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಹೋಬಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ದರ್ಶನ್ ಅವರು ಮಳವಳ್ಳಿ ಪಟ್ಟಣದಲ್ಲಿ ಸ್ಟಾರ್ ಚಂದ್ರು ಜೊತೆಯಲ್ಲಿ ತೆರೆದ ವಾಹನದಲ್ಲಿ ಮತಯಾಚಿಸಿದರು.
ಈ ವೇಳೆ ಮಾತನಾಡಿ, ಕಳೆದ ಬಾರಿ ಇಷ್ಟೇ ಪ್ರೀತಿ ವಿಶ್ವಾಸ ತೋರಿದ್ದೀರಿ, ಆಶೀರ್ವಾದ ಮಾಡಿದ್ರಿ. 10 ಜನ್ಮ ಆದರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಈ ಬಾರಿ ಕೂಡ ಆಶೀರ್ವಾದ ಮಾಡಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸ್ಟಾರ್ ಚಂದ್ರು ನನಗೆ ಹಳೆ ಪರಿಚಯ. ಒಬ್ಬ ಸಂಸದರಿಗೆ ವರ್ಷಕ್ಕೆ 5 ಕೋಟಿ ಅನುದಾನ ಸಿಗುತ್ತದೆ. ಅದರಲ್ಲಿ ಏನು ಕೆಲಸ ಮಾಡಲು ಸಾಧ್ಯ? ನಮ್ಮ ಸ್ಟಾರ್ ಚಂದ್ರು ಅವರು ಸರ್ಕಾರದ ಅನುದಾನದ ಜೊತೆ ಕೈಯಿಂದ 5 ಕೋಟಿ ಹಾಕಿ ಅಭಿವೃದ್ಧಿ ಕೆಲಸ ಮಾಡುತ್ತಾರೆ. ಅವರಿಗೆ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕು ಎಂದರು.
ಸ್ಟಾರ್ ಚಂದ್ರು ಅವರು ಜನರ ಜೊತೆಗಿರಲು ಬಂದಿದ್ದಾರೆ. ಅವರಿಗೆ ಆಶೀರ್ವದಿಸಿ ನರೇಂದ್ರಸ್ವಾಮಿ ಅವರ ಕೈ ಬಲಪಡಿಸಿ ಎಂದರು.