ವಿಜಯಪುರ: ಗೊಮ್ಮಟ ನಗರಿ ಸಮೀಪದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಘೋರ ಅವಘಡ ಸಂಭವಿಸಿದೆ.
ಸೋಮವಾರ ಸಂಜೆ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಆಹಾರ ಸಂಸ್ಕರಣಾ ಘಟಕದಲ್ಲಿ ಆಹಾರ ಧಾನ್ಯಗಳ ಮೂಟೆಗಳು ಕುಸಿದು, ಕಾರ್ಯನಿರ್ವಹಿಸುತ್ತಿದ್ದ ಅನೇಕ ಕಾರ್ಮಿಕರು ಮೂಟೆಗಳ ಅಡಿಯಲ್ಲಿ ಸಿಲುಕಿದ್ದರು. ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿದೆ.
ಸಂಜೆ ಕೆಲಸ ಸಾಗಿರುವಾಗಲೇ ಅವಘಡ ಸಂಭವಿಸಿದೆ. ಆ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತಾದರೂ ಐವರು ಕಾರ್ಮಿಕರು ಅದಾಗಲೇ ಅಸುನೀಗಿದ್ದರು. ಅನೇಕರು ಮೂಟೆಗಳಡಿಯಲ್ಲಿ ಸಿಲುಕಿದ್ದು ಅವರನ್ನು ರಕ್ಷಿಸಲು ರಾತ್ರಿಯಿಡೀ ಕಾರ್ಯಾಚರಣೆ ನಡೆದಿದೆ. ಪುಣೆಯಿಂದ NDRF ತಂಡವನ್ನು ಕರೆಸಲಾಗಿದೆ. ಇಂದು ಕೂಡಾ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ ರಕ್ಷಣಾ ತಂಡ ಮತ್ತಷ್ಟು ಮಂದಿಯ ಮೃತದೇಹಗಳನ್ನು ಹೊರತೆಗೆದಿದೆ.
ಮೃತರನ್ನು ಬಿಹಾರ ಮೂಲದ ರಾಮ ಬಾಲಕ್ (52), ಲುಖೋ ಜಾಧವ (45), ರಾಜೇಶ್ ಮುಖಿಯಾ (25), ರಾಮಬ್ರೀಜ್ ಮುಖಿಯಿ (29), ಶಂಭು ಮುಖಿಯಾ (26) ಎಂದು ಗುರುತಿಸಲಾಗಿದೆ.