ಮಂಗಳೂರು : ರಾಜ್ಯದ ಬಂದರು ನಗರ ಮಂಗಳೂರಿನಲ್ಲಿ ವೈಭವೋಪೇತ ರಥೋತ್ಸವ ಗಮನಸೆಳೆಯುತು. ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಇತಿಹಾಸ ಪ್ರಸಿದ್ಧ ‘ಮಂಗಳೂರು ರಥೋತ್ಸವ’ ಭಕ್ತಸಾಗರದ ಜಯಕಾರದೊಂದಿಗೆ ಜರುಗಿತು.
ಕಾರ್ ಸ್ಟ್ರೀಟ್ ಜಾತ್ರೆ ಎಂದೇ ಗುರುತಾಗಿರುವ ಶ್ರೀ ವೆಂಕಟರಮಣ ದೇವಸ್ಥಾನದ ಜಾತ್ರಾ ವೈಭವಕ್ಕೆ ತನ್ನದೇ ಆದ ಇತಿಹಾಸವಿದೆ. ತನ್ನದೇ ಆದ ಕಾರಣಿಕವೂ ಇದೆ. ಈ ಕಾರಣದಿಂದಾಗಿಯೇ ‘ಕರಾವಳಿಯ ತಿರುಪತಿ’ ಎಂಬಂತೆ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿರುವ ರಥಬೀದಿ ವೆಂಕಟೇಶ್ವರನ ಸನ್ನಿಧಿಯಲ್ಲಿಂದು ಅನನ್ಯ ಕೈಂಕರ್ಯ ಅದ್ಧೂರಿಯಾಗಿ ನೆರವೇರಿತು.
ಕಳೆದ ಹಲವು ದಿನಗಳಿಂದ ಶ್ರೀಕ್ಷೇತ್ರದಲ್ಲಿ ನಿರಂತರ ಕೈಂಕರ್ಯಗಳು ನೆರವೇರಿದ್ದು, ಶುಕ್ರವಾರದಂದು ಜನಸಾಗರದ ನಡುವೆ ದೇವರ ಮಹೋತ್ಸವ ಜರುಗಿತು. ಬ್ರಹ್ಮರಥೋತ್ಸವ ಪ್ರಯುಕ್ತ ಬೆಳಿಗ್ಗೆ ಮಹಾಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ವಿಧಿವಿಧಾನಗಳು ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು. ಶ್ರೀ ದೇವರಿಗೆ ಶತಕಲಶಾಭಿಷೇಕ , ಗಂಗಾಭಿಷೇಕ , ಪುಳಕಾಭಿಷೇಕ ನೆರವೇರಿತು .
ಯಜ್ಞಮಂಟಪದಲ್ಲಿ ಮಹಾಯಜ್ಞ ಮಹಾ ಪೂರ್ಣಾಹುತಿ ಬಳಿಕ ಶ್ರೀ ದೇವರು ಸ್ವರ್ಣ ಪಲ್ಲಕಿಯಲ್ಲಿ ವಿರಾಜಮಾನರಾಗಿ ಭವ್ಯ ಬ್ರಹ್ಮರಥದಲ್ಲಿ ರಥಾರೂಢರಾಗಿ ಮಂಗಳೂರು ರಥೋತ್ಸವ ನೆರವೇರಿತು. ದೇಶ-ವಿದೇಶಗಳಿಂದ ಆಗಮಿಸಿದ್ದ ಗೌಡ ಸಾರಸ್ವತ ಸಮಾಜದ ಸಹಸ್ರಾರು ಪಾಲ್ಗೊಂಡು ಪುನೀತರಾದರು.