ಮೇಷ:- ಪ್ರತಿದಿನದಂತೆ ಎಲ್ಲವೂ ಸರಿಯಾಗಿದೆ ಎಂದುಕೊಂಡಾಗಲೇ ಕುತಂತ್ರಗಳಿಂದ ತೊಂದರೆ ಎದುರಾಗುವ ಸಂದರ್ಭ ಇದೆ. ಈ ಬಗ್ಗೆ ಸಾಕಷ್ಟು ಪೂರ್ವಭಾವಿ ತಯಾರಿ ಮಾಡಿಕೊಂಡು ಅವರನ್ನು ಎದುರಿಸಿದಾಗ ಅವರು ಪೇಪರು ಹುಲಿಗಳೆಂದು ತಿಳಿದು ಬೆಸ್ತುಬೀಳುವಿರಿ.
ವೃಷಭ:- ಕೇವಲ ಭ್ರಮೆಯಲ್ಲಿರುವ, ಚಿಂತಿಸುವ, ಹಗಲುಗನಸು ಕಾಣುವ ವಿಚಾರ ಕೈಬಿಡಿ. ಶ್ರಮದ ದುಡಿತ ಕ್ಷೇಮ. ಮಕ್ಕಳ ವಿವಾಹದ ವಿಷಯದಲ್ಲಿಆಶಾದಾಯಕ ಸಮಾಚಾರವೊಂದು ನಿಮ್ಮ ಕಿವಿಗೆ ಬೀಳುವುದು. ಇದರಿಂದ ಮನಸ್ಸಿಗೆ ಸಮಾಧಾನ ಆಗುವುದು.
ಮಿಥುನ:- ಮನೆಯಿಂದ ಹೊರಹೋಗುವಾಗ ನಿತ್ಯ ಉಪಯೋಗಿಸುವ ಕ್ರೆಡಿಟ್ ಕಾರ್ಡ್, ಪಾನ್‌ಕಾರ್ಡ್ ಮತ್ತು ಬ್ಯಾಂಕ್‌ಗೆ ಸಂಬಂಧಿಸಿದ ವಸ್ತುಗಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಕೆಲವು ಚಾಣಾಕ್ಷರು ನಿಮ್ಮ ಜೇಬಿಗೆ ಕತ್ತರಿ ಹಾಕಿ ನಿಮ್ಮ ಅಮೂಲ್ಯ ದಾಖಲೆಗಳನ್ನು ಲಪಟಾಯಿಸುವ ಸಾಧ್ಯತೆ ಇದೆ.
ಕಟಕ:- ಆಸ್ತಿ ಇದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟ ಎಂಬಂಥ ಪರಿಸ್ಥಿತಿಯಲ್ಲಿ ನೀವಿದ್ದೀರಿ. ಅಚಾನಕ್ ಆಗಿ ನಿಮ್ಮ ಪಾಲಿಗೆ ತಲೆನೋವು ತಂದ ಆಸ್ತಿ ವಿಚಾರದಲ್ಲಿ ಅನೇಕ ರೀತಿಯ ಶುಭವಾರ್ತೆಗಳನ್ನು ಕೇಳುವಿರಿ. ಇದರಿಂದ ಮನಸ್ಥಿತಿ ತಿಳಿಗೊಳ್ಳುವುದು.
ಸಿಂಹ:- ಹಣೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದು ತರವಲ್ಲ. ಅಂತೆಯೇ ವಾಹನ ಚಾಲನೆಯಲ್ಲಿ ನಾನು ಪ್ರವೀಣ ಎಂದು ಅಧಿಕ ವೇಗದಲ್ಲಿ ವಾಹನ ಚಲಾಯಿಸಿ ಅಪಘಾತ ಮಾಡಿಕೊಳ್ಳುವ ಸಾಧ್ಯತೆ ಇದೆ. ಪ್ರಯಾಣದಲ್ಲಿಎಚ್ಚರದಿಂದ ಇರಿ.
ಕನ್ಯಾ:- ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ಲಭ್ಯವಾಗುವುದು. ಇದರಿಂದ ನೀವು ಮುದಗೊಳ್ಳುವಿರಿ. ಆಸ್ತಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ತುಲಾ:- ಕಟ್ಟಡ ಕಟ್ಟುವ ಕೆಲಸಗಾರರಿಗೆ ಮತ್ತು ಕಟ್ಟಡ ಒಳಾಂಗಣ ವಿನ್ಯಾಸ ಮಾಡುವವರಿಗೆ ಹೇರಳ ಅವಕಾಶಗಳು ಬರುವುವು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುವ ಇರಾದೆ ಇದ್ದರೂ ಮುಗ್ಧ ಗ್ರಾಹಕರಿಗೆ ಮೋಸ ಮಾಡದೇ ಇರುವುದು ಒಳ್ಳೆಯದು.
ವೃಶ್ಚಿಕ:- ಮನ ಬಂದಂತೆ ಖರ್ಚಿಗೆ ದಾರಿ ಮಾಡಿಕೊಳ್ಳದಿರಿ. ಅಗತ್ಯದ ಅನಿರೀಕ್ಷಿತ ಖರ್ಚು ದಿನದ ಮುಕ್ತಾಯಕ್ಕೆ ಸೃಷ್ಟಿಯಾಗಲಿದೆ. ಚಿತ್ರರಂಗದ ವ್ಯಕ್ತಿಗಳಿಗೆ ಸ್ವಲ್ಪ ಅನಾನುಕೂಲವಾದರೂ ಸಂಜೆಯ ವೇಳೆಗೆ ಶುಭವಾರ್ತೆ ಕೇಳುವಿರಿ.
ಧನುಸ್ಸು:- ಹಳೆಯ ಕಡತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಯೇ ವಿಲೇವಾರಿ ಮಾಡಿ. ನಂತರ ಪಶ್ಚಾತ್ತಾಪ ಪಡುವುದು ಬೇಡ. ಬೇರೆಯವರ ಹಣಕಾಸಿನ ವಿಷಯದಲ್ಲಿ ಮೂಗು ತೂರಿಸುವುದು, ಜಾಮೀನಿಗಾಗಿ ಸಹಿ ಮಾಡುವುದು ತರವಲ್ಲ.
ಮಕರ:- ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರದ ಬಗ್ಗೆ ಎಚ್ಚರವಿರಲಿ. ಸಾಡೇಸಾತ್ ಪ್ರಭಾವ ಮೆಲ್ಲನೆ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆದರೆ ಹೆಚ್ಚಿನ ತೊಂದರೆ ಆಗುವುದಿಲ್ಲ.
ಕುಂಭ:- ಸರ್ಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆಗಳು ಎದುರಾಗುವ ಸಂದರ್ಭವಿದೆ. ನಿಮ್ಮ ಬರಹಗಳು ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಮೀನ:- ಸಹವರ್ತಿಗಳೆಲ್ಲರೂ ನಿಮ್ಮ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂಬ ಆಲೋಚನೆಯನ್ನು ತೊರೆದುಬಿಡಿ. ಭಗವಂತನ ಅನುಗ್ರಹ ಇರುವಾಗ ಭಯವೇಕೆ. ಹಣಕಾಸಿನ ತೊಂದರೆ ಕಡಿಮೆ ಆಗುವುದು.