ಬೆಂಗಳೂರಿನಲ್ಲಿ ಭಿಕ್ಷೆ ಬೇಡಿ ಬಂದ ಹಣವನ್ನು ನೆರೆ ಸಂತ್ರಸ್ತರಿಗೆ ಕೊಟ್ಟಾದರೂ ಕೇಂದ್ರ ಸರ್ಕಾರದ ಕಣ್ಣು ತೆರೆಯುವಂತೆ ಮಾಡುತ್ತೇನೆ. ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗದೇ ಹೋದರೆ ಈ ಕ್ರಮದ ಹೊರತು ಬೇರೇನು ಮಾಡಲೂ ತೋಚುತ್ತಿಲ್ಲ ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನುಡಿದ್ದಾರೆ.
ಬೆಳಗಾವಿಯ ಗೋಕಾಕ್ ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೆರೆ ಸಂತ್ರಸ್ತರ ಜತೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಕೇಂದ್ರದಿಂದ ಒಂದು ರೂಪಾಯಿ ನೆರೆ ಪರಿಹಾರ ಸಿಕ್ಕಿಲ್ಲ . ಬರಗಾಲ ಹಿನ್ನೆಲೆ ಹೆಚ್.ಡಿ ಕುಮಾರಸ್ವಾಮಿ ಬರ ಪರಿಹಾರಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 10 ಸಾವಿರ ಕೊಟ್ಟು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.
ಹಾಗೆಯೇ ಸಾಲ ಮರುಪಾವತಿಸಲು ಯಾರಾದ್ರೂ ನಿಮ್ಮನ್ನ ಒತ್ತಾಯಿಸಿದರೇ ಅವರ ಹೆಸರು ಬರೆದಿಟ್ಟು ವಿಷ ಕುಡಿಯುತ್ತೇನೆ ಎಂದು ಹೇಳಿ ಎಂದು ನೆರೆ ಸಂತ್ರಸ್ತರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚೋದನೆ ಮಾತುಗಳನ್ನಾಡಿದ್ದಾರೆ.