ಬೆಂಗಳೂರು: ಎಸ್ಐಆರ್ (SIR) ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಕೇಳಿಬಂದಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಕುರಿತು ಪ್ರತಿಕ್ರಿಯೆ ನೀಡುವರೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಸಂದರ್ಭದಲ್ಲಿ ಜಾರಿಯಲ್ಲಿದ್ದ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಟೆಂಡರ್ ಪ್ರಕ್ರಿಯೆ ಮುಂದುವರಿಸಿದೆ ಹಾಗೂ ಐದು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಸಿಟಿಜನ್ ರೈಟ್ಸ್ ಫೌಂಡೇಶನ್ (CRF) ಅಧ್ಯಕ್ಷ ಕೆ.ಎ. ಪಾಲ್ ಅವರು ನವೆಂಬರ್ 6ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ, ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.
2026ರ ಸೆಪ್ಟೆಂಬರ್ 22ರಂದು ನೀತಿ ಸಂಹಿತೆ ಜಾರಿಯಾದ ಬಳಿಕವೂ ಟೆಂಡರ್ ಪ್ರಕ್ರಿಯೆಗಳು ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 23ರಂದು ಐದು ಪ್ಯಾಕೇಜ್ಗಳ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಸೆಪ್ಟೆಂಬರ್ 19ರಂದು ಪ್ರಕಟಿಸಿದ್ದ ಆರು ಪ್ಯಾಕೇಜ್ಗಳ ಟೆಂಡರ್ಗಳ ತಾಂತ್ರಿಕ ಪರಿಶೀಲನೆ ಮತ್ತು ಆರ್ಥಿಕ ಬಿಡ್ಗಳ ತೆರೆಯುವಿಕೆ ನೀತಿ ಸಂಹಿತೆ ಅವಧಿಯಲ್ಲೇ ನಡೆದಿವೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ಸೆಪ್ಟೆಂಬರ್ 23ರಂದು ನಾಲ್ಕು ಹಾಗೂ ಅಕ್ಟೋಬರ್ 8ರಂದು ಮೂರು ಪ್ಯಾಕೇಜ್ಗಳಿಗೆ ಹೊಸ ಟೆಂಡರ್ ಪ್ರಕಟಿಸಿರುವುದನ್ನೂ CRF ಪ್ರಶ್ನಿಸಿದೆ.
BSWML ಅಧಿಕಾರಿಗಳ ಪಾತ್ರ, ಟೆಂಡರ್ ಪ್ರಕ್ರಿಯೆಯಲ್ಲಿನ ಸಂಭಾವ್ಯ ಪಕ್ಷಪಾತ, ಹಿತಾಸಕ್ತಿ ಸಂಘರ್ಷ ಮತ್ತು ಅಧಿಕಾರ ದುರುಪಯೋಗದ ಕುರಿತು ತನಿಖೆ ನಡೆಸುವಂತೆ ಫೌಂಡೇಶನ್ ಒತ್ತಾಯಿಸಿದೆ. ಆರೋಪಗಳು ಸಾಬೀತಾದರೆ ಸಂಬಂಧಿತ ಟೆಂಡರ್ಗಳನ್ನು ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.

ಎಸ್ಐಆರ್ ವಿಚಾರದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ರಾಹುಲ್, ಕರ್ನಾಟಕದ ಟೆಂಡರ್ ಆರೋಪದ ಬಗ್ಗೆಯೂ ಮಾತನಾಡುವರೇ? ಎಂದು ಸಾರ್ವಜನಿಕರು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಕೇಂದ್ರದ ವಿಚಾರದಲ್ಲಿ ತಪ್ಪು ಕಂಡಾಗ ಧ್ವನಿ ಎತ್ತುವ ನಾಯಕರು, ಕರ್ನಾಟಕದಲ್ಲಿ ಕೇಳಿಬಂದಿರುವ ಈ ಆರೋಪದ ಬಗ್ಗೆಯೂ ಸ್ಪಷ್ಟನೆ ನೀಡಬೇಕೆಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಆರೋಪಗಳ ಕುರಿತು ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ ಎಂದು ಸಾರ್ವಜನಿಕರು ಪ್ರತಿಪಾದಿಸಿದ್ದಾರೆ.















































































