ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅಕ್ಟೋಬರ್ 20ರಿಂದ 26ರವರೆಗೆ 15 ದಾಳಿಗಳನ್ನು ನಡೆಸಿ, 27ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಲೂಚ್ ಲಿಬರೇಷನ್ ಆರ್ಮಿ (BLA) ಹೇಳಿಕೊಂಡಿದೆ. ದಾಳಿಗಳಲ್ಲಿ ಹಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗಿಡಾರ್ ಪ್ರದೇಶದಲ್ಲಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಘರ್ಷ ನಡೆದಿದ್ದು, ಚೆರ್ ಕುಂಚೆಟಿ ಮತ್ತು ಮಸ್ತುಂಗ್ನ ಗುರ್ಗಿನಾದಲ್ಲಿ ನಡೆದ ದಾಳಿಗಳಲ್ಲಿ ತಲಾ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು BLA ಪ್ರತಿಪಾದಿಸಿದೆ. ದಶ್ತ್ ಬಾಬಾ ಪ್ರದೇಶದಲ್ಲಿ ಇಬ್ಬರು ಸೈನಿಕರು ಹತರಾಗಿದ್ದಾರೆ ಎಂದೂ ಹೇಳಿದೆ.

ಕಲಾತ್, ಖುಜ್ದಾರ್ ಮತ್ತು ನುಷ್ಕಿ ಪ್ರದೇಶಗಳಲ್ಲಿಯೂ ದಾಳಿಗಳು ನಡೆದಿವೆ. ಖುಜ್ದಾರ್ನ ಜಂಟಿ ಭದ್ರತಾ ಠಾಣೆಯ ಮುಖ್ಯ ದ್ವಾರ ಸ್ಫೋಟಗೊಂಡಿದ್ದು, ಕ್ವೆಟ್ಟಾ–ಕರಾಚಿ ವ್ಯಾಪಾರ ಮಾರ್ಗದ ಸೇತುವೆಗೆ ಹಾನಿಯಾಗಿದೆ ಎಂದು ಸಂಘಟನೆ ತಿಳಿಸಿದೆ.













































































