ಲಕ್ನೋ: ಉತ್ತರ ಪ್ರದೇಶದ ಮತದಾರರ ಚೀಟಿಯೊಂದರಲ್ಲಿ ವ್ಯಕ್ತಿಯ ಹೆಸರು ತಪ್ಪಾಗಿ ಮುದ್ರಣಗೊಂಡಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ‘ರಾಮ್ಹಿತ್ ಯಾದವ್’ ಎಂಬ ಹೆಸರನ್ನು ‘ರಾಮ್ ನೇ ಯಾದವ್ ಕೋ ಮಾರಾ’ (ರಾಮ್ ಯಾದವ್ನನ್ನು ಹೊಡೆದನು) ಎಂದು ನಮೂದಿಸಿರುವುದನ್ನು ಪ್ರಶ್ನಿಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ಗೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮತದಾರರ ಚೀಟಿಯಲ್ಲಿನ ತಪ್ಪನ್ನು ಉಲ್ಲೇಖಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಸಂಜಯ್ ಸಿಂಗ್, “ನಿಮ್ಮ ಕಂಪ್ಯೂಟರ್ ಜಾತಿವಾದಿಯೇ? ರಾಮ್ ಯಾದವ್ನನ್ನೇ ಏಕೆ ಹೊಡೆದನು? ಸಿಂಗ್, ಪಾಠಕ್, ಅಸ್ಥಾನಾ, ಶರ್ಮಾ, ರೈ ಅಥವಾ ಬಿಷ್ಟ್ ಅವರನ್ನು ಏಕೆ ಹೊಡೆಯಲಿಲ್ಲ? ನೀವು ಯಾವುದಾದರೂ ರಾಜಕೀಯ ಪಕ್ಷದ ಅಜೆಂಡಾವನ್ನು ಜಾರಿಗೊಳಿಸುತ್ತಿದ್ದೀರಾ?” ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನವದೀಪ್ ರಿನ್ವಾ, ಕಂಪ್ಯೂಟರ್ ಅಥವಾ ಸಾಫ್ಟ್ವೇರ್ಗಳಿಗೆ ಜಾತಿವಾದ ಇರುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿಯೂ ವ್ಯಕ್ತಿಯೊಬ್ಬರ ತಂದೆಯ ಹೆಸರನ್ನು ‘ರಾಮ್ ನೇ ಶರ್ಮಾ ಕೋ ಮಾರಾ’ ಎಂದು ತಪ್ಪಾಗಿ ದಾಖಲಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.
ತಪ್ಪು ನಡೆದಿರುವುದನ್ನು ಒಪ್ಪಿಕೊಂಡಿರುವ ರಿನ್ವಾ, “ನಮ್ಮಿಂದ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಅದೃಷ್ಟವಶಾತ್, ಈ ತಪ್ಪಿನಲ್ಲಿ ಯಾವುದೇ ಜಾತಿ ತಾರತಮ್ಯ ನಡೆದಿಲ್ಲ. ದೇವರ ಕೃಪೆಯಿಂದ ‘ರಾಮ್’ ಯಾವುದೇ ಅಲ್ಪಸಂಖ್ಯಾತ ವ್ಯಕ್ತಿಯನ್ನು ಹೊಡೆದಿಲ್ಲ. ಇಲ್ಲದಿದ್ದರೆ ಜಾತಿವಾದದ ಜೊತೆಗೆ ಕೋಮು ಪ್ರಚೋದನೆಯ ಆರೋಪವನ್ನೂ ಎದುರಿಸಬೇಕಾಗುತ್ತಿತ್ತು” ಎಂದು ವ್ಯಂಗ್ಯವಾಡಿದ್ದಾರೆ.
ಆದರೆ, ಮತದಾರರ ಪಟ್ಟಿಯಲ್ಲಿನ ಇಂತಹ ದೋಷಗಳ ಕುರಿತು ಹಾಸ್ಯಮಯ ಪ್ರತಿಕ್ರಿಯೆ ನೀಡಿರುವುದು ಎಎಪಿ ಸೇರಿದಂತೆ ವಿವಿಧ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ. ಮತದಾರರ ದಾಖಲೆಗಳ ನಿಖರತೆ ಮತ್ತು ಚುನಾವಣಾ ವ್ಯವಸ್ಥೆಯ ಹೊಣೆಗಾರಿಕೆ ಕುರಿತು ಈ ಘಟನೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.














































































