ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ವೀಟೊ ಅಧಿಕಾರವಿಲ್ಲದ ಖಾಯಂ ಸದಸ್ಯತ್ವದ ಹೊಸ ವರ್ಗವನ್ನು ಸೃಷ್ಟಿಸುವ ಪ್ರಸ್ತಾವನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ವ್ಯವಸ್ಥೆಯು ಹೊಸದಾಗಿ ಸೇರ್ಪಡೆಯಾಗುವ ದೇಶಗಳನ್ನು ‘ಎರಡನೇ ದರ್ಜೆ’ಯ ಸದಸ್ಯರನ್ನಾಗಿ ಮಾಡಲಿದೆ. ಅಲ್ಲದೆ, ಈಗಿರುವ ಐವರು ಖಾಯಂ ಸದಸ್ಯರ ಪ್ರಾಬಲ್ಯದಲ್ಲೂ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಭಾರತ ಎಚ್ಚರಿಸಿದೆ.
ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವೀಟೊ ಅಧಿಕಾರದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಹರೀಶ್ ಪರ್ವತನೇನಿ ಅವರು, ಭದ್ರತಾ ಮಂಡಳಿಯ ಸುಧಾರಣೆ ಸಮಾನತೆ ಮತ್ತು ನ್ಯಾಯಸಮ್ಮತತೆಯನ್ನು ಆಧರಿಸಿರಬೇಕು ಎಂದು ಪ್ರತಿಪಾದಿಸಿದರು.
ವೀಟೊ ಅಧಿಕಾರ ಅಸ್ತಿತ್ವದಲ್ಲಿರುವವರೆಗೆ, ಸುಧಾರಣೆಗೊಂಡ ಭದ್ರತಾ ಮಂಡಳಿಯ ಎಲ್ಲ ಖಾಯಂ ಸದಸ್ಯರಿಗೂ ಆ ಅಧಿಕಾರ ನೀಡಬೇಕು ಎಂಬುದು ಭಾರತದ ಸ್ಪಷ್ಟ ನಿಲುವು. ವೀಟೊ ಅಧಿಕಾರವಿಲ್ಲದ ದೀರ್ಘಾವಧಿಯ ಸದಸ್ಯತ್ವದ ಪ್ರತ್ಯೇಕ ವರ್ಗ ಸೃಷ್ಟಿಸುವುದರಿಂದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ಮೂಲಭೂತ ಬದಲಾವಣೆಯಾಗುವುದಿಲ್ಲ ಎಂದು ಅವರು ಹೇಳಿದರು.

ಪ್ರಸ್ತುತ 15 ಸದಸ್ಯರನ್ನು ಹೊಂದಿರುವ ಭದ್ರತಾ ಮಂಡಳಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ಖಾಯಂ ಸದಸ್ಯರಾಗಿದ್ದು, ವೀಟೊ ಅಧಿಕಾರ ಹೊಂದಿವೆ. ಉಳಿದ 10 ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. 1945ರಲ್ಲಿ ಸ್ಥಾಪನೆಯಾದ ಮಂಡಳಿಯ ರಚನೆಯು ಇಂದಿನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿಲ್ಲ ಎಂಬುದು ಭಾರತದ ವಾದ.
ಮಂಡಳಿಯಲ್ಲಿ ಖಾಯಂ ಮತ್ತು ಖಾಯಂ ಅಲ್ಲದ ಎರಡೂ ವರ್ಗಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಭಾರತ ದೀರ್ಘಕಾಲದಿಂದ ಒತ್ತಾಯಿಸುತ್ತಿದೆ. ಖಾಯಂ ಅಲ್ಲದ ಸದಸ್ಯರ ಸಂಖ್ಯೆಯನ್ನು ಮಾತ್ರ ಹೆಚ್ಚಿಸುವುದರಿಂದ ಅರ್ಥಪೂರ್ಣ ಸುಧಾರಣೆ ಸಾಧ್ಯವಿಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಇದೇ ವೇಳೆ, 2028–29ರ ಅವಧಿಗೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ಸ್ಥಾನ ಪಡೆಯಲು ಭಾರತ ಸ್ಪರ್ಧಿಸುತ್ತಿದೆ. ಏಷ್ಯಾ–ಪೆಸಿಫಿಕ್ ಗುಂಪಿನ ಒಂದು ಸ್ಥಾನಕ್ಕಾಗಿ ತಜಿಕಿಸ್ತಾನದೊಂದಿಗೆ ಸ್ಪರ್ಧಿಸಲಿದ್ದು, ಚುನಾವಣೆ 2027ರ ಜೂನ್ನಲ್ಲಿ ನಡೆಯಲಿದೆ.
ಭಾರತ 2021–22ರಲ್ಲಿ ಎಂಟನೇ ಬಾರಿಗೆ ಭದ್ರತಾ ಮಂಡಳಿಯ ಸದಸ್ಯತ್ವ ವಹಿಸಿತ್ತು. ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯುವ ಭಾರತದ ಪ್ರಯತ್ನವೂ ಮುಂದುವರಿದಿದೆ.













































































