ಬೆಂಗಳೂರು: ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ ಎಸ್. ರಾವ್ ಮಾಫಿ ಸಾಕ್ಷಿಯಾಗಲು 59ನೇ ಸಿಸಿಹೆಚ್ ನ್ಯಾಯಾಲಯ ಅನುಮತಿ ನೀಡಿದೆ.
ಮಾಫಿ ಸಾಕ್ಷಿಯಾಗಲು ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದ್ದು, ಆಗಸ್ಟ್ 25ರಂದು ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಹೊರಡಿಸಿದ್ದಾರೆ.

ಪ್ರದೋಷ್‌ಗೆ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರು ಜೈಲಿನಲ್ಲೇ ಇರಬೇಕು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಸತ್ಯಾಂಶಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಸೂಚಿಸಲಾಗಿದೆ.
ಯಾವುದೇ ವಿಚಾರವನ್ನು ಮುಚ್ಚಿಟ್ಟರೆ ಅಥವಾ ಸುಳ್ಳು ಸಾಕ್ಷ್ಯ ನೀಡಿದರೆ ಮಾಫಿ ಸಾಕ್ಷಿ ಸ್ಥಾನವನ್ನು ರದ್ದುಗೊಳಿಸಿ ಮತ್ತೆ ಆರೋಪಿಯನ್ನಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಮಾಫಿ ಸಾಕ್ಷಿಯಾಗಲು ತಮ್ಮ ಮೇಲೆ ಯಾರಿಂದಲೂ ಪ್ರಭಾವ, ಒತ್ತಡ ಅಥವಾ ಬಲವಂತ ಇರಲಿಲ್ಲ ಎಂದು ಪ್ರದೋಷ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಈಗಾಗಲೇ ನ್ಯಾಯಾಲಯ ಪ್ರದೋಷ್‌ಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರ ಉತ್ತರಗಳನ್ನು ದಾಖಲಿಸಿಕೊಂಡಿದೆ.
ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳು ಪ್ರದೋಷ್‌ಗೆ ತಿಳಿದಿರಬಹುದು ಎನ್ನಲಾಗಿದ್ದು, ಅವರು ನೀಡಲಿರುವ ಹೇಳಿಕೆಗಳು ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ.
ನ್ಯಾಯಾಲಯದ ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ಪ್ರದೋಷ್‌ಗೆ ತಲುಪಿಸಲಾಗಿದೆ. ಇದೀಗ ಪ್ರದೋಷ್ ನೀಡಲಿರುವ ಹೇಳಿಕೆಯತ್ತ ಪ್ರಕರಣದ ಆರೋಪಿಗಳು ಹಾಗೂ ತನಿಖಾ ತಂಡದ ಗಮನ ನೆಟ್ಟಿದೆ.







































































