ಬೆಂಗಳೂರು: ಖ್ಯಾತ ನಟಿ ಶಕೀಲಾ ಅವರು ಇತ್ತೀಚೆಗೆ ಗಂಭೀರ ಕುತ್ತಿಗೆ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅತಿಯಾದ ಮೊಬೈಲ್ ಬಳಕೆ ಹಾಗೂ ತಪ್ಪಾದ ಭಂಗಿಯೇ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಮೂಲದ ಶಕೀಲಾ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಕುತ್ತಿಗೆ ನೋವು ಹಾಗೂ ನರಗಳಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಗೆ ಸುಮಾರು ₹3 ಲಕ್ಷ ವೆಚ್ಚವಾಗಿದೆ ಎನ್ನಲಾಗಿದೆ.
ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಶಕೀಲಾ, ತಮ್ಮ ಆರೋಗ್ಯ ಸಮಸ್ಯೆಯ ಕುರಿತು ಮಾಹಿತಿ ನೀಡಿದ್ದಾರೆ. ಹಾಸಿಗೆಯಲ್ಲಿ ಒಂದೇ ಮಗ್ಗುಲಿಗೆ ಮಲಗಿ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದೆ. ಕಾಫಿ ಕುಡಿಯಲು ಮಾತ್ರ ಎದ್ದು ಬರುತ್ತಿದ್ದೆ. ಬಳಿಕ ಮತ್ತೆ ಗೇಮ್ ಆಡುತ್ತಿದ್ದೆ. ನಂತರ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ನಿರಂತರವಾಗಿ ಒಂದೇ ಭಂಗಿಯಲ್ಲಿ ಮಲಗಿ ಮೊಬೈಲ್ ಬಳಸಿದ್ದರಿಂದ ಕುತ್ತಿಗೆಯ ನರಗಳ ಮೇಲೆ ಒತ್ತಡ ಉಂಟಾಗಿ ಸಮಸ್ಯೆ ಎದುರಾಯಿತು ಎಂದು ಶಕೀಲಾ ತಿಳಿಸಿದ್ದಾರೆ. ಪರಿಣಾಮವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು ಎಂದು ಅವರು ವಿವರಿಸಿದ್ದಾರೆ.
ಮೊಬೈಲ್ ಬಳಕೆ ಬಗ್ಗೆ ಶಕೀಲಾ ಎಚ್ಚರಿಕೆ
ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ನೆಕ್ ಕಾಲರ್ ಧರಿಸುವಂತೆ ಸೂಚಿಸಿದ್ದು, ಶಕೀಲಾ ಅದನ್ನು ಧರಿಸಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
ಮೊಬೈಲ್ ಅತ್ಯಂತ ಉಪಯುಕ್ತ ಸಾಧನವಾದರೂ, ಅಗತ್ಯಕ್ಕಿಂತ ಹೆಚ್ಚು ಸಮಯ ಬಳಸಬಾರದು ಎಂದು ಅವರು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಮೊಬೈಲ್ ನೀಡುವಾಗ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.







































































