ಚೆನ್ನೈ: ಭಾರೀ ನಿರೀಕ್ಷೆ ಮೂಡಿಸಿದ್ದ ತಮಿಳು ಚಿತ್ರ ‘ಜನ ನಾಯಗನ್’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗಿದೆ. ಮೊದಲ ದಿನವೇ 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಲಿದೆ ಎಂಬ ಅಂದಾಜು ಇದ್ದರೂ, ಚಿತ್ರವು ವಿಶ್ವದಾದ್ಯಂತ 78.27 ಕೋಟಿ ರೂ. ಗ್ರಾಸ್ ಕಲೆಕ್ಷನ್ ಗಳಿಸಿದೆ.
ಗುರುವಾರ ದೇಶಾದ್ಯಂತ 13,067 ಪ್ರದರ್ಶನ ಕಂಡ ಚಿತ್ರವು ಶೇ. 41.6ರಷ್ಟು ಥಿಯೇಟರ್ ಆಕ್ಯುಪೆನ್ಸಿ ದಾಖಲಿಸಿದೆ. ಭಾರತದಲ್ಲಿ 41 ಕೋಟಿ ರೂ. ನೆಟ್ ಕಲೆಕ್ಷನ್ ಗಳಿಸಿದ್ದು, ಇದರಲ್ಲಿ 36.50 ಕೋಟಿ ರೂ. ತಮಿಳು ಆವೃತ್ತಿಯಿಂದಲೇ ಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು 48.27 ಕೋಟಿ ರೂ. ಗ್ರಾಸ್ ಗಳಿಕೆಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಚಿತ್ರವು 30 ಕೋಟಿ ರೂ. ಗ್ರಾಸ್ ಗಳಿಕೆ ಮಾಡಿದ್ದು, ದೇಶೀಯ ಹಾಗೂ ಸಾಗರೋತ್ತರ ಮಾರುಕಟ್ಟೆ ಸೇರಿ ಒಟ್ಟು 78.27 ಕೋಟಿ ರೂ. ಸಂಗ್ರಹಿಸಿದೆ.

ಚಿತ್ರದ ಮೊದಲ ದಿನದ ಗಳಿಕೆಗೆ ಪೈರಸಿ ದೊಡ್ಡ ಹೊಡೆತ ನೀಡಿದೆ ಎನ್ನಲಾಗುತ್ತಿದೆ. ಬಿಡುಗಡೆಯ ಮುನ್ನವೇ ಚಿತ್ರದ ಪೈರಸಿ ಆವೃತ್ತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ ಪ್ರೇಕ್ಷಕರು ಹಾಗೂ ಕೆಲವು ವಿಮರ್ಶಕರಿಂದ ಬಂದಿರುವ ಮಿಶ್ರ ಮತ್ತು ನೆಗೆಟಿವ್ ಪ್ರತಿಕ್ರಿಯೆಗಳೂ ಕಲೆಕ್ಷನ್ ಮೇಲೆ ಪರಿಣಾಮ ಬೀರಿವೆ ಎಂದು ಚಿತ್ರರಂಗದ ವಲಯಗಳು ಅಭಿಪ್ರಾಯಪಟ್ಟಿವೆ.
ಆದಾಗ್ಯೂ, ತಮಿಳುನಾಡಿನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ದೇಶೀಯ ನೆಟ್ ಗಳಿಕೆಯಲ್ಲಿ ತಮಿಳು ಆವೃತ್ತಿಯೇ ಸಿಂಹಪಾಲು ಪಡೆದಿದೆ. ವಾರಾಂತ್ಯದಲ್ಲಿ ಪ್ರೇಕ್ಷಕರ ಬೆಂಬಲ ಹೆಚ್ಚಾದರೆ ಚಿತ್ರದ ಕಲೆಕ್ಷನ್ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿತರಕರು ನಿರೀಕ್ಷಿಸಿದ್ದಾರೆ.






































































