ಬೆಂಗಳೂರು: ರಾಜ್ಯದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ದೇಣಿಗೆಗಳ ಭದ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸಲು ಕರ್ನಾಟಕ ಸರ್ಕಾರ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಜಾರಿಗೊಳಿಸಿದೆ.
ಹೊಸ ನಿಯಮದಂತೆ, ಎಲ್ಲಾ ದೇವಾಲಯಗಳಲ್ಲಿ ಹುಂಡಿಗಳನ್ನು ನಾಲ್ಕೂ ದಿಕ್ಕಿನಿಂದ ಆವರಿಸುವಂತೆ ಸಿಸಿಟಿವಿ ಅಥವಾ ವೆಬ್ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ದೃಶ್ಯಗಳನ್ನು ಕೇಂದ್ರ ಸರ್ವರ್ನಲ್ಲಿ ಸಂಗ್ರಹಿಸಲಾಗುತ್ತದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮುಜರಾಯಿ ಇಲಾಖೆ ಮತ್ತು ಪೊಲೀಸರಿಂದ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತದೆ.

ಭಕ್ತರ ಅನುಕೂಲಕ್ಕಾಗಿ QR ಕೋಡ್ ಮೂಲಕ ಡಿಜಿಟಲ್ ದೇಣಿಗೆ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಅದನ್ನು ದೇವಾಲಯದ ಲೆಕ್ಕಪತ್ರ ವ್ಯವಸ್ಥೆಗೆ ಸಂಪರ್ಕಿಸಲಾಗುತ್ತದೆ. QR ಕೋಡ್ನಲ್ಲಿ ಬ್ಯಾಂಕ್ ಹಾಗೂ IFSC ವಿವರಗಳನ್ನು ಪ್ರದರ್ಶಿಸಬೇಕು.
ಹುಂಡಿ ಎಣಿಕೆಗೆ ಕಂದಾಯ ಇಲಾಖೆಯ ಅಧಿಕಾರಿಗಳ ಹಾಜರಾತಿ ಕಡ್ಡಾಯವಾಗಿದ್ದು, ದೊಡ್ಡ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಹಾಗೂ ಇತರ ದೇವಾಲಯಗಳಲ್ಲಿ ಎರಡು ವಾರಕ್ಕೊಮ್ಮೆ ಎಣಿಕೆ ನಡೆಸಬೇಕು. ಎಣಿಕೆ ವೇಳೆ ದೊರೆಯುವ ಚಿನ್ನ, ಬೆಳ್ಳಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಅದೇ ದಿನ ಜಿಲ್ಲಾ ಅಥವಾ ಉಪ ಖಜಾನೆಗೆ ಜಮಾ ಮಾಡಬೇಕು.
ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ವೀಡಿಯೊ ದಾಖಲೆ ಮಾಡುವುದು ಕಡ್ಡಾಯ. ಭಾಗವಹಿಸುವ ಸಿಬ್ಬಂದಿಗೆ ಮುಖ ಗುರುತಿಸುವಿಕೆ (Face Recognition) ವ್ಯವಸ್ಥೆ ಜಾರಿಯಾಗಲಿದ್ದು, ಒಳಪ್ರವೇಶಕ್ಕೂ ಮುನ್ನ ತಮ್ಮ ಬಳಿ ಇರುವ ನಗದು ವಿವರವನ್ನು ಘೋಷಿಸಬೇಕು.
ಹುಂಡಿ ಎಣಿಕೆಗೆ ಸಾರ್ವಜನಿಕರನ್ನು ಬಳಸುವ ಬದಲು ಗೃಹರಕ್ಷಕರು, ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರನ್ನು ನಿಯೋಜಿಸಬೇಕು ಎಂದು ಸರ್ಕಾರ ಸೂಚಿಸಿದೆ. ಎಣಿಕೆ ವೇಳೆ ಕಳ್ಳತನ ಅಥವಾ ಅಕ್ರಮ ಕಂಡುಬಂದರೆ ಸಂಬಂಧಪಟ್ಟ ದೇವಾಲಯದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.







































































