ವಾಷಿಂಗ್ಟನ್: ಮುಂದಿನ ವಾರ ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದೆ.
ಜೂನ್ 17ರಂದು ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆಯಲಿರುವ ಶೃಂಗಸಭೆಯ ಸಂದರ್ಭದಲ್ಲಿ ಇಬ್ಬರು ನಾಯಕರು ಭೇಟಿಯಾಗಿ ಭಾರತ-ಅಮೆರಿಕ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದದ ಮಾತುಕತೆಗಳ ಪ್ರಗತಿಯನ್ನು ಪರಿಶೀಲಿಸುವ ನಿರೀಕ್ಷೆಯಿದೆ.

ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ಮೊದಲ ಔಪಚಾರಿಕ ವ್ಯಾಪಾರ ಒಪ್ಪಂದದ ರೂಪುರೇಷೆಗಳ ಕುರಿತು ಚರ್ಚೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಆದರೆ ಶೃಂಗಸಭೆಯಲ್ಲೇ ಅಂತಿಮ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಕಡಿಮೆ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ನಡೆದ ಆಪರೇಷನ್ ಸಿಂಧೂರ್ ಬಳಿಕ ಮೋದಿ ಮತ್ತು ಟ್ರಂಪ್ ನಡುವಿನ ಮೊದಲ ನೇರ ದ್ವಿಪಕ್ಷೀಯ ಭೇಟಿಯಾಗಿರುವುದರಿಂದ ಈ ಸಭೆಯು ವಿಶೇಷ ಗಮನ ಸೆಳೆದಿದೆ.
ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಸಹಕಾರ ಮತ್ತು ಪ್ರಾದೇಶಿಕ ಭದ್ರತೆ ಸೇರಿದಂತೆ ಹಲವು ವಿಷಯಗಳು ಚರ್ಚೆಯಲ್ಲಿ ಪ್ರಮುಖ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.




































































