ಬೆಂಗಳೂರು: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ನುಗ್ಗಿ ದಾಂದಲೆ ನಡೆಸಿದ್ದಾರೆ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾಶ್ಮೀರಿ ಮಹಿಳೆಯರ ಧ್ವನಿಯನ್ನು ಕೇಂದ್ರೀಕರಿಸಿ ನ್ಯಾಯ, ಸ್ಮರಣೆ ಮತ್ತು ಹೊಣೆಗಾರಿಕೆಯ ಪ್ರಶ್ನೆಗಳನ್ನು ಚರ್ಚಿಸಲು ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮವನ್ನು ತಡೆಯಲು ಎಬಿವಿಪಿ ಸದಸ್ಯರು ದಾಳಿ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕ್ಯಾಂಪಸ್‌ಗೆ ನುಗ್ಗಿ ಕಾರ್ಯಕ್ರಮವನ್ನು ಅಡ್ಡಿಪಡಿಸಲು ಪ್ರಯತ್ನಿಸಿದಷ್ಟೇ ಅಲ್ಲದೆ, ಆಸ್ತಿಗೆ ಹಾನಿ ಮಾಡಿದ್ದು, ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಸಂಘಟಕರು ಹಾಗೂ ಭಾಗವಹಿಸುವವರನ್ನು ಬೆದರಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು.
ಘಟನೆಯ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿ ಮುಖಂಡರು ಆಕ್ಷೇಪಿಸಿದರು.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ವಿಮರ್ಶಾತ್ಮಕ ಚಿಂತನೆ ಮತ್ತು ಮುಕ್ತ ಸಂವಾದಕ್ಕೆ ಅವಕಾಶ ನೀಡುವ ಕೆಲವೇ ಶೈಕ್ಷಣಿಕ ವಲಯಗಳಲ್ಲಿ ಒಂದಾಗಿದೆ. ಇಂತಹ ವಾತಾವರಣವನ್ನು ಹಾಳು ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ವಿದ್ಯಾರ್ಥಿ ನಾಯಕರು ಟೀಕಿಸಿದರು.
ಹಿಂಸಾಚಾರ ಪ್ರಚೋದನೆಗೆ ಕಾರಣವಾದ ಸಂಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ವಿದ್ಯಾರ್ಥಿಗಳು ಆಗ್ರಹಿಸಿದರು. ಜೊತೆಗೆ, ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪ್ರಜಾಸತ್ತಾತ್ಮಕ ಸಭೆಗಳನ್ನು ಮುಕ್ತವಾಗಿ ನಡೆಸುವಂತಾಗಲು ಭದ್ರತಾ ಕ್ರಮಗಳನ್ನು ಬಲಪಡಿಸಬೇಕೆಂದು ಅವರು ಒತ್ತಾಯಿಸಿದರು.



















































