ಬೆಳಗಾವಿ: ಬೆಳಗಾವಿ ದಂಡು ಮಂಡಳಿ ಭರತೇಶ ಶಿಕ್ಷಣ ಸಂಸ್ಥೆಯ ಹತ್ತಿರ ಹೊಂದಿದ ಪ್ರದೇಶದಲ್ಲಿ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಖಾಸಗಿ ಸಗಟು ಹೂವಿನ ಮಾರುಕಟ್ಟೆಯ ಪ್ರಾರಂಭಕ್ಕೆ ಹಂಚಿಕೆ ಮಾಡಿರುವ ವಿಚಾರವನ್ನು ಖಂಡಿಸಿರುವ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್, ಈ ವಿಷಯವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಗಮನಸೆಳೆದಿದ್ದಾರೆ.
ಈ ಕುರಿತಂತೆ ರಾಜನಾಥ್ ಸಿಂಗ್ ಅವರಿಗೆ ಪಾತ್ರ ಬರೆದಿರುವ ಶೆಟ್ಟರ್, ಹೂವಿನ ಸಗಟು ಮರುಕಟ್ಟೆ ಪ್ರಾರಂಭಕ್ಕೆ ದಂಡು ಮಂಡಳಿ ಪೂರ್ವದಲ್ಲಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅದರಂತೆ ಈಗಾಗಲೆ ಬೆಳಗಾವಿ ಅಶೋಕನಗರದಲ್ಲಿ ಹೂವಿನ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿರುವಾಗ ಎರಡನೇ ಸಗಟು ಹೂವಿನ ಮಾರುಕಟ್ಟೆ ಪ್ರಾರಂಭಕ್ಕೆ ದಂಡು ಮಂಡಳಿ ಒಪ್ಪಿಗೆ ನೀಡಿರುವುದು ಕಾನುನುಬದ್ಧವಲ್ಲದ ನಿರ್ಧಾರ ಎಂದಿದ್ದಾರೆ.
ಈ ಕುರಿತು ಕಾರ್ಯದರ್ಶಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಬೆಳಗಾವಿ ಇವರು ಸಹ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದ ಮುಖೇನ ತಿಳಿಸಿ, ಕೂಡಲೆ ಕಾನೂನು ಬದ್ಧವಲ್ಲದ ಈ ನೂತನ ಪ್ರದೇಶದಲ್ಲಿ ನಡೆಸಲಾಗುತ್ತಿರುವ ಹೂವಿನ ವ್ಯಾಪಾರ ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿರುವುದು ದುಖಃದ ಸಂಗತಿ ಎಂದಿರುವ ಶೆಟ್ಟರ್, ದಂಡು ಮಂಡಳಿ ನಡೆಸುವ ಮಾಸಿಕ ಸಭೆಗೆ ಬೆಳಗಾವಿ ಲೋಕಸಭಾ ಸದಸ್ಯರು ವಿಶೇಷ ಅಹ್ವಾನಿತರು ಆದರೆ ಇಂತಹ ಮಹತ್ವದ ನಿರ್ಧಾರ ಕೈಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನನ್ನು ಸಭೆಗೆ ಅಹ್ವಾನಿಸಲಾಗಿಲ್ಲ ಎಂದೂ ಹೇಳಿದ್ದಾರೆ.
ಮೇಲಾಗಿ ದಂಡು ಮಂಡಳಿ ಪ್ರದೇಶ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಇದಾಗ್ಯೂ ಸಹ ಇಂತಹ ಮಹತ್ವವಾದ ವಿಷಯವನ್ನು ಗಮನಕ್ಕೆ ತರದೆ ನಿರ್ಧಾರ ತೆಗೆದುಕೊಂಡಿರುವುದು ಅಥವಾ ಸಭೆಯಲ್ಲಿ ಠರಾವು ಪಾಸ್ ಮಾಡಿರುವುದು ತುಂಬಾ ವಿಷಾದದ ಸಂಗತಿ ಎಂದು ಪತ್ರದಲ್ಲಿ ತಿಳಿಸಿ, ಈ ಕೂಡಲೆ ಕಾನೂನು ಬದ್ಧವಲ್ಲದ ಸಗಟು ಹೂವಿನ ಮರುಕಟ್ಟೆಯಲ್ಲಿನ ವ್ಯಾಪಾರವನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಕೇಂದ್ರ ರಕ್ಷಣಾ ಸಚಿವರಿಗೆ ಹಾಗೂ ಇದರೊಂದಿಗೆ ದಂಡು ಮಂಡಳಿ ರಕ್ಷಣಾ ಎಸ್ಟೇಟ್ ಅಧಿಕಾರಿ, ಪುಣೆ ಇವರಿಗೂ ಸಹ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಶೆಟ್ಟರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಸ್ತಾಪಿತ ವಿಷಯವಾಗಿ ಸುಧೀರ್ಘವಾಗಿ ಚರ್ಚಿಸಲು ಸಭೆಯೊಂದನ್ನು ಆಯೋಜಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ದಂಡು ಮಂಡಳಿ, ಬೆಳಗಾವಿ ಇವರಿಗೆ ಪತ್ರದ ಮುಖೇನ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



























































