ಮಂಡ್ಯ: ರಾಜ್ಯ ಸರ್ಕಾರದಿಂದ ಬಾಕಿ ಬಿಲ್ ಬಿಡುಗಡೆ ಆಗದಿರುವುದನ್ನು ವಿರೋಧಿಸಿ ಗುತ್ತಿಗೆದಾರರು ಮಾರ್ಚ್ 5ರಂದು ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಮಂಡ್ಯದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಕಿ ಹಣ ತಕ್ಷಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವ ತೀರ್ಮಾನ ಕೈಗೊಳ್ಳಲಾಯಿತು.
ಸಭೆ ಬಳಿಕ ಮಾತನಾಡಿದ ಮಂಜುನಾಥ್, “ರಾಜ್ಯ ಮಟ್ಟದಲ್ಲಿ ಗುತ್ತಿಗೆದಾರರ ಸುಮಾರು ₹37,000 ಕೋಟಿ ಬಾಕಿ ಉಳಿದಿದೆ. ಮಂಡ್ಯ ಜಿಲ್ಲೆಯಲ್ಲಿ ಮಾತ್ರವೇ ₹950 ಕೋಟಿ ಹಣ ಬಾಕಿಯಾಗಿದೆ. ಸಾಲ ಮಾಡಿ ಕೆಲಸ ನಿರ್ವಹಿಸಿದ್ದೇವೆ. ಆದರೆ ಹಣ ಬಿಡುಗಡೆ ಆಗದ ಕಾರಣ ಬಡ್ಡಿ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ” ಎಂದು ಹೇಳಿದರು.
ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರಕಿಲ್ಲ ಎಂದು ಆರೋಪಿಸಿದ ಅವರು, “ಹಿಂದಿನ ಸರ್ಕಾರದ ಅವಧಿಗಿಂತಲೂ ಈಗ ಕಮಿಷನ್ ಸಮಸ್ಯೆ ಹೆಚ್ಚಾಗಿದೆ” ಎಂದು ದೂರಿದರು.
ಬಾಕಿ ಹಣ ತಕ್ಷಣ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.























































