ನ್ಯೂಯಾರ್ಕ್: ಯುರೋಪಿಯನ್ ಒಕ್ಕೂಟದೊಂದಿಗೆ ಕಳೆದ ತಿಂಗಳು ಅಂತಿಮಗೊಂಡಿರುವ ಭಾರತದ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ), ಅಮೆರಿಕವನ್ನು ಸಹ ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗುವಂತೆ ಪ್ರೇರೇಪಿಸಿರಬಹುದೆಂದು ಏಷ್ಯಾ ಸೊಸೈಟಿಯ ದಕ್ಷಿಣ ಏಷ್ಯಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್ (ಎಎಸ್‌ಪಿಐ)ನ ದಕ್ಷಿಣ ಏಷ್ಯಾ ಉಪಕ್ರಮಗಳ ನಿರ್ದೇಶಕಿ ಫರ್ವಾ ಆಮೆರ್ ಮಾತನಾಡಿ, ಭಾರತ–ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ಕೆಲಕಾಲದಿಂದ ನಡೆಯುತ್ತಿದ್ದರೂ, ಇಯು ಜೊತೆಗಿನ ಒಪ್ಪಂದವು ವಾಷಿಂಗ್ಟನ್‌ಗೆ ನಿರ್ಣಾಯಕ ಪ್ರೇರಣೆಯಾಗಿ ಕಾರ್ಯನಿರ್ವಹಿಸಿರಬಹುದು ಎಂದು ಹೇಳಿದರು.
“ಇಯು–ಭಾರತ ಎಫ್‌ಟಿಎ ಬಳಿಕ ತಕ್ಷಣವೇ ಭಾರತ–ಅಮೆರಿಕ ಒಪ್ಪಂದದ ಘೋಷಣೆ ಬಂದಿರುವುದು ಗಮನಾರ್ಹವಾಗಿದೆ,” ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ಬಳಿಕ, ಭಾರತ ರಫ್ತುಗಳ ಮೇಲೆ ವಿಧಿಸಲಾಗಿದ್ದ ಶೇ.25ರ ಪರಸ್ಪರ ಸುಂಕವನ್ನು ಶೇ.18ಕ್ಕೆ ಇಳಿಸುವ ಒಪ್ಪಂದವನ್ನು ಎರಡೂ ದೇಶಗಳು ಘೋಷಿಸಿವೆ. ಶ್ವೇತಭವನದ ಮಾಹಿತಿಯಂತೆ, ರಷ್ಯಾದ ತೈಲ ಖರೀದಿ ಹಿನ್ನೆಲೆಯಲ್ಲಿ ಭಾರತ ಮೇಲೆ ವಿಧಿಸಲಾಗಿದ್ದ ದಂಡಾತ್ಮಕ ಶೇ.25 ಸುಂಕವನ್ನು ಅಮೆರಿಕ ಕೈಬಿಡಲಿದೆ.
ಸುಮಾರು ಒಂದು ವರ್ಷ ಕಾಲ ನಡೆದ ಮಾತುಕತೆಗಳು ಕೆಲ ಹಂತಗಳಲ್ಲಿ ಕಠಿಣವಾಗಿದ್ದರೂ, ಅಂತಿಮವಾಗಿ ರಾಜಕೀಯ ಮಟ್ಟದ ಹಸ್ತಕ್ಷೇಪ ಒಪ್ಪಂದಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಆಮೆರ್ ಹೇಳಿದರು. “ರಷ್ಯಾ ಸಂಬಂಧಿತ ಪ್ರಶ್ನೆ ಭಾರತಕ್ಕೆ ಇನ್ನೂ ಸೂಕ್ಷ್ಮ ವಿಷಯವಾಗಿಯೇ ಉಳಿದಿದೆ. ತೈಲ ಆಮದು ಮೂಲಗಳನ್ನು ವೈವಿಧ್ಯಗೊಳಿಸುತ್ತಿದ್ದರೂ, ಭಾರತ ಸಂಬಂಧಗಳನ್ನು ಸಮತೋಲನದಲ್ಲಿಡಲು ಬಯಸುತ್ತದೆ,” ಎಂದರು.
ಇದೇ ಸಂದರ್ಭದಲ್ಲಿ, ಉನ್ನತ ಮಟ್ಟದ ವ್ಯಾಪಾರ ಅನುಭವ ಹೊಂದಿರುವ ಮತ್ತೊಬ್ಬ ತಜ್ಞೆ ವೆಂಡಿ ಕಟ್ಲರ್, ಭಾರತ–ಅಮೆರಿಕ ಒಪ್ಪಂದವು ಭಾರತೀಯ ರಫ್ತುದಾರರಿಗೆ ಆಗ್ನೇಯ ಏಷ್ಯಾದ ಸ್ಪರ್ಧಿ ರಾಷ್ಟ್ರಗಳಿಗಿಂತ ಸ್ವಲ್ಪ ಮುನ್ನಡೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. “ಅಮೆರಿಕ ಭಾರತಕ್ಕೆ ವಿಧಿಸಿರುವ ಶೇ.18ರ ಸುಂಕವು, ಆಸಿಯಾನ್ ದೇಶಗಳ ಮೇಲೆ ಇರುವ ಶೇ.19–20ರ ಸುಂಕಕ್ಕಿಂತ ಕಡಿಮೆಯಾಗಿದೆ,” ಎಂದು ಹೇಳಿದರು.
ಅಮೆರಿಕದ ಮಾಜಿ ಉಪ ವಾಣಿಜ್ಯ ಪ್ರತಿನಿಧಿಯಾಗಿರುವ ಕಟ್ಲರ್, ಸುಂಕ ಕಡಿತದ ವ್ಯಾಪ್ತಿ ಕುರಿತು ಟ್ರಂಪ್ ಅವರ ಹೇಳಿಕೆಗಳು ಇನ್ನೂ ಅಸ್ಪಷ್ಟವಾಗಿವೆ ಎಂದು ಗಮನಿಸಿದರು. ಆದರೆ, ಅಮೆರಿಕವು ಇಯುಗಿಂತ ಹೆಚ್ಚು ಆಳವಾದ ಸುಂಕ ಕಡಿತವನ್ನು ಭಾರತದೊಂದಿಗೆ ಸಾಧಿಸಿರುವ ಸಾಧ್ಯತೆ ಇದೆ ಎಂದರು.
ಒಟ್ಟಾರೆ, ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ನಿರ್ಣಾಯಕ ಖನಿಜಗಳು, ತಂತ್ರಜ್ಞಾನ ಸಹಕಾರ ಹಾಗೂ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವದಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ದಾರಿಯನ್ನು ತೆರೆದಿದೆ ಎಂದು ಕಟ್ಲರ್ ಅಭಿಪ್ರಾಯಪಟ್ಟರು.
ಇದರ ನಡುವೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಆಯೋಜಿಸಿರುವ ನಿರ್ಣಾಯಕ ಖನಿಜಗಳ ಸಚಿವರ ಸಭೆಯಲ್ಲಿ ಭಾಗವಹಿಸಲು ವಾಷಿಂಗ್ಟನ್‌ಗೆ ತೆರಳುವ ಮಾರ್ಗದಲ್ಲಿ ನ್ಯೂಯಾರ್ಕ್‌ಗೆ ಆಗಮಿಸಿದ್ದಾರೆ.
























































