ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಗ್ಯಾರಂಟಿ ಸರ್ಕಾರವು ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲೆಯ ತಾಲೂಕುಗಳಲ್ಲಿ ₹1,051.5 ಕೋಟಿ ಅಂದಾಜು ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ಯೋಜನೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.
ಕಲಬುರಗಿಯ ಪ್ರತಿ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರು ಯೋಜನೆಗಳಿಗೆ ಅನುದಾನ ಮತ್ತು ಕಾಮಗಾರಿಗಳ ಪ್ರಗತಿ ವಿವರ:
- ₹16 ಕೋಟಿ ವೆಚ್ಚದಲ್ಲಿ ಅಫಜಲಪುರ ತಾಲ್ಲೂಕಿನಲ್ಲಿ ಹಸರಗುಂಡಗಿ ಹಾಗೂ ಇತರೆ 6 ಗ್ರಾಮಗಳು ಮತ್ತು ಮಾರ್ಗ ಮಧ್ಯದ 5 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯ ಹಂತದಲ್ಲಿವೆ.
- ₹12 ಕೋಟಿ ವೆಚ್ಚದಲ್ಲಿ ಸೇಡಂ ತಾಲ್ಲೂಕಿನಲ್ಲಿ ಕಚೂರು ಗ್ರಾಮ ಮತ್ತು ಇತರೆ 9 ಗ್ರಾಮಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ.
- ₹15 ಕೋಟಿ ವೆಚ್ಚದಲ್ಲಿ ಚಿಂಚೋಳಿ ತಾಲ್ಲೂಕಿನಲ್ಲಿ ಸಲಗರ ಬಸಂತಪುರ ಹಾಗೂ ಇತರೆ 9 ಗ್ರಾಮಗಳಲ್ಲಿ ಕಾರ್ಯ ಪ್ರಗತಿಯಲ್ಲಿ.
- ₹260 ಕೋಟಿ ವೆಚ್ಚದಲ್ಲಿ ಕಾಳಗಿ, ಚಿತ್ತಾಪುರ, ಚಿಂಚೊಳ್ಳಿ ಮತ್ತು ಕಲಬುರಗಿಯಲ್ಲಿ ಡಿಬಿಒಟಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರಡಿ ಬೆಡಸೂರು ಮತ್ತು ಇತರೆ 95 ಜನವಸತಿ ಪ್ರದೇಶಗಳು ಹಾಗೂ ಕಾಳಗಿ ಪಟ್ಟಣದಲ್ಲಿ ಕಾಮಗಾರಿಗಳು ಸಾಗುತ್ತಿವೆ.
- ₹185 ಕೋಟಿ ವೆಚ್ಚದಲ್ಲಿ ಚಿತ್ತಾಪುರ ತಾಲ್ಲೂಕಿನಲ್ಲಿ ಡಿಬಿಒಟಿ ಕಾಮಗಾರಿಗಳು ಸನ್ನತಿ ಮತ್ತು ಇತರೆ 75 ಜನವಸತಿ ಪ್ರದೇಶಗಳು, ಕಲಬುರಗಿ ತಾಲೂಕಿನ ಕುಸ್ನೂರು ಮತ್ತು ಇತರೆ ಗ್ರಾಮಗಳಲ್ಲಿ ನಡೆಯುತ್ತಿವೆ.
- ₹36 ಕೋಟಿ ವೆಚ್ಚದಲ್ಲಿ ಆಳಂದ ತಾಲ್ಲೂಕಿನ ಕೊರಳ್ಳಿ ಹಾಗೂ ಇತರೆ 4 ಗ್ರಾಮಗಳ 9 ಜನವಸತಿ ಪ್ರದೇಶಗಳು, ಮಾರ್ಗ ಮಧ್ಯದ 5 ಜನವಸತಿ ಪ್ರದೇಶಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ.
- ₹85 ಕೋಟಿ ವೆಚ್ಚದಲ್ಲಿ ಕಲಬುರಗಿ ತಾಲ್ಲೂಕಿನ ಫರಹತಾಬಾದ್ ಹಾಗೂ ಇತರೆ 8 ಗ್ರಾಮಗಳ 22 ಜನವಸತಿಗಳು ಮತ್ತು ಮಾರ್ಗ ಮಧ್ಯದ 2 ಜನವಸತಿ ಪ್ರದೇಶಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ.
- ₹265 ಕೋಟಿ ವೆಚ್ಚದಲ್ಲಿ ಜೇವರ್ಗಿ ತಾಲ್ಲೂಕಿನ 22 ಗ್ರಾಮಗಳ 33 ಜನವಸತಿಗಳು, ಯಡ್ರಾಮಿ ತಾಲ್ಲೂಕಿನ ಆಲೂರು ಹಾಗೂ ಇತರೆ 58 ಗ್ರಾಮಗಳ 66 ಜನವಸತಿ ಪ್ರದೇಶಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ.
- ₹27 ಕೋಟಿ ವೆಚ್ಚದಲ್ಲಿ ಜೇವರ್ಗಿ ತಾಲೂಕಿನ ಕೂಡಿ ಮತ್ತು ಇತರೆ 11 ಗ್ರಾಮಗಳಲ್ಲಿ ಯೋಜನೆ ಪ್ರಗತಿಯಲ್ಲಿದೆ.
- ₹71.5 ಕೋಟಿ ವೆಚ್ಚದಲ್ಲಿ ಆಳಂದ, ಕಮಲಾಪುರ ತಾಲ್ಲೂಕಿನಲ್ಲಿ ವಿಕೆ ಸಲಗರ್ ಹಾಗೂ ಇತರೆ 16 ಗ್ರಾಮಗಳ 23 ಜನವಸತಿ ಪ್ರದೇಶಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ.
- ₹79 ಕೋಟಿ ವೆಚ್ಚದಲ್ಲಿ ಜೇವರ್ಗಿ ತಾಲ್ಲೂಕಿನ ಯಾಳವಾರ ಹಾಗೂ ಇತರೆ 20 ಗ್ರಾಮಗಳಲ್ಲಿನ 24 ಜನವಸತಿ ಪ್ರದೇಶಗಳಲ್ಲಿ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ.
ಈ ಎಲ್ಲ ಯೋಜನೆಗಳಿಗಾಗಿ ಈಗಾಗಲೇ ಒಟ್ಟು ₹887.81 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಜನತೆಗೆ ಶುದ್ಧ ಜೀವಜಲ ನಿರಂತರವಾಗಿ ಲಭಿಸುವಂತೆ ಮಾಡುವುದರೊಂದಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಮತ್ತು ಭವಿಷ್ಯದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಗಮನಹರಿಸುವುದು ನನ್ನ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.



















































