ಮಂಗಳೂರು: ರಥ ಸಪ್ತಮಿ ಹಿನ್ನೆಲೆಯಲ್ಲಿ ನಾಡಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಕೈಂಕರ್ಯಗಳು ನೆರವೇರಿದವು. ಹಲವೆಡೆ ಸೂರ್ಯಾರಾಧನೆಯ ಸನ್ನಿವೇಶಗಳೂ ಗಮನಸೆಳೆದಿವೆ. ಇದೇ ವೇಳೆ, ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ‘ರಥಸಪ್ತಮಿ’ ಸಾಮೂಹಿಕ 108 ಸೂರ್ಯನಮಸ್ಕಾರ ಕಾರ್ಯಕ್ರಮ ಆಕರ್ಷಣೆಯ ಕೇಂದ್ರಬಿಂದುವಾಯಿತು.

ಎಸ್.ಪಿ. ವೈ.ಎಸ್.ಎಸ್. (ರಿ) ಕರ್ನಾಟಕ ಯೋಗ ಸಮಿತಿಯ ವತಿಯಿಂದ ದ.ಕ ಜಿಲ್ಲೆಯ ವಿವಿದೆಡೆ 16 ದೇವಾಲಯಗಳಲ್ಲಿ ರಥಸಪ್ತಮಿ ಪ್ರಯುಕ್ತ ಭಾನುವಾರ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಪ್ರಯುಕ್ತ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿಯೂ ಕ್ಷೇತ್ರದ ಅನುವಂಶೀಯ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಹಾಗೂ ಶ್ರೀ ರಾಮಕೃಷ್ಣ ತಪೋವನದ ಸ್ಥಾಪಕಧ್ಯಕ್ಷರಾದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಮತ್ತು ಅರ್ಚಕರಾದ ಶಶಿಮಹಾರಾಜ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಸಂಚಾಲಕರಾದ ಸತೀಶ್ ಗರೋಡಿ, ಭಾರತಿ ನಾಗೇಶ್ ಉಪಸ್ಥಿತಿಯಲ್ಲಿ ಪೊಳಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಮುಂಜಾನೆ 4:45 ಕ್ಕೆ ಭಜನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಅಮೃತ ವಚನ ಪಂಚಾಂಗ ಪಠಣಾ, ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರ ಮತ್ತು 3 ಹಂತಗಳ 9 ಆವೃತ್ತಿಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ, ಅಮೃತಾಸನವನ್ನು ನುರಿತ ಯೋಗ ಶಿಕ್ಷಕರಿಂದ ಪ್ರಾತ್ಯಕ್ಷತೆಯ ಮೂಲಕ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 550 ಕ್ಕೂ ಯೋಗಬಂಧುಗಳು ಜೊತೆಗೆ ಸಾರ್ವಜನಿಕರು ಕೂಡ ಭಾಗವಹಿಸಿದರು. ಬೆಳಗ್ಗೆ 7:00 ಗಂಟೆಗೆ ಯೋಗ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

ರಥಸಪ್ತಮಿಯಂದು ಶ್ರೀದೇವಿ ಸಾನಿಧ್ಯದಲ್ಲಿ ಸಾಮೂಹಿಕ 108 ಸೂರ್ಯನಮಸ್ಕಾರ ಮಾಡುವ ಮಹತ್ವವನ್ನು ಪೊಳಲಿ ನಗರದ ಸಹಸಂಚಾಲಕರಾದ ಸ್ಮಿತಾ ತಿಳಿಸಿದರು.

ಪೊಳಲಿ ನಗರ ಸಂಚಾಲಕರು ಜನಾರ್ಧನ್ ಪೆರಾರ, ನಗರದ ಪ್ರಮುಖರಾದ ಕೇಶವ ಕಾವೇರಿ, ಮೋಹನ್ ದಾಸ್ ಪೊಳಲಿ, ಅಶೋಕ ಪಾಲೇಮಾರ್, ಶಶಿರಾಜ್ ಪುಂಚಮೆ, ರಾಜೇಶ್ವರಿ ಪೊಳಲಿ, ಕುಮಾರ್ ಕೈಕಂಬ, ಕೃಷ್ಣ ಕೈಕಂಬ, ಅರುಣ್ ಆರಂಬೋಡಿ, ಶಶಿಕಲಾ ಕುಕ್ಕಿಪಾಡಿ, ಸುರೇಂದ್ರ ಸಿದ್ದಕ್ಕಟ್ಟೆ, ನಿತಿನ್ ಅರಳ, ಸುನೀತಾ ರಾಯಿ, ಕೃಷ್ಣಪ್ಪ ಆರಂಬೋಡಿ ಮೊದಲಾದವರು ಭಾಗವಹಿಸಿ ಯೋಗದ ಮಹತ್ವವನ್ನು ಸಾರಿದರು. ಕಾರ್ಯಕ್ರಮವನ್ನು ಕಾವ್ಯ ಪೊಳಲಿ ನಿರೂಪಿಸಿದರು, ಸತೀಶ್ ಗರೋಡಿ ವಂದಿಸಿದರು.





























































