ಮುಂಬೈ: ಹಿಂದಿ ಚಿತ್ರರಂಗದಲ್ಲಿ ‘ಕೋಮುವಾದಿ’ ಪಕ್ಷಪಾತವಿದೆ ಎಂಬ ತಮ್ಮ ಹೇಳಿಕೆಗೆ ಸಂಬಂಧಿಸಿ ಉದ್ಭವಿಸಿದ ವಿವಾದದ ಬಗ್ಗೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಸ್ಪಷ್ಟನೆ ನೀಡಿದ್ದಾರೆ. ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊ ಹಂಚಿಕೊಂಡಿರುವ ರೆಹಮಾನ್, ಭಾರತ ತಮ್ಮ ಮನೆ ಮಾತ್ರವಲ್ಲ, ತಮ್ಮ ಸ್ಫೂರ್ತಿ ಮತ್ತು ಗುರು ಕೂಡ ಆಗಿದೆ ಎಂದು ಹೇಳಿದ್ದಾರೆ. “ಸಂಗೀತವು ಯಾವಾಗಲೂ ಸಂಸ್ಕೃತಿಗಳನ್ನು ಸಂಪರ್ಕಿಸುವ, ಆಚರಿಸುವ ಮತ್ತು ಗೌರವಿಸುವ ನನ್ನ ಮಾರ್ಗ. ನನ್ನ ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದರೆ ಸಂಗೀತದ ಮೂಲಕ ಗೌರವ ಸಲ್ಲಿಸುವುದೇ ನನ್ನ ಆಶಯ. ನಾನು ಎಂದಿಗೂ ನೋವುಂಟು ಮಾಡಲು ಬಯಸಿಲ್ಲ,” ಎಂದು ತಿಳಿಸಿದ್ದಾರೆ.
ಭಾರತೀಯನಾಗಿರುವುದಕ್ಕೆ ತಾವು ಹೆಮ್ಮೆಪಡುತ್ತೇನೆ ಎಂದಿರುವ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಹುಸಾಂಸ್ಕೃತಿಕ ಧ್ವನಿಗಳಿಗೆ ಅವಕಾಶ ನೀಡುವ ವಾತಾವರಣವೇ ತಮ್ಮ ಸೃಜನಶೀಲತೆಯ ಬಲವಾಗಿದೆ ಎಂದು ಹೇಳಿದರು. ವೇವ್ ಶೃಂಗಸಭೆ, ಯುವ ನಾಗಾ ಸಂಗೀತಗಾರರೊಂದಿಗೆ ಸಹಕಾರ, ಸನ್‌ಶೈನ್ ಆರ್ಕೆಸ್ಟ್ರಾ ಮಾರ್ಗದರ್ಶನ, ‘ಸೀಕ್ರೆಟ್ ಮೌಂಟೇನ್’ ವರ್ಚುವಲ್ ಬ್ಯಾಂಡ್ ನಿರ್ಮಾಣ ಹಾಗೂ ಹ್ಯಾನ್ಸ್ ಜಿಮ್ಮರ್ ಜೊತೆ ‘ರಾಮಾಯಣ’ ಸಂಗೀತ ಕಾರ್ಯ— ತಮ್ಮ ಉದ್ದೇಶವನ್ನು ಮತ್ತಷ್ಟು ಬಲಪಡಿಸಿವೆ ಎಂದು ಅವರು ವಿವರಿಸಿದರು.
ए आर रहमान ने आलोचकों को जवाब दिया
उन्होंने स्पष्ट किया कि उन्हें अभिव्यक्ति की स्वतंत्रता है और वे बहुसांस्कृतिक संगीत के समर्थक हैं।
उन्हें आलोचकों से देशभक्ति का प्रमाण पत्र लेने की आवश्यकता नहीं है। pic.twitter.com/r5xfevZBzV
— Dhruv Rathee Satire (@DhruvRathenx) January 18, 2026
ವೀಡಿಯೊದ ಅಂತ್ಯದಲ್ಲಿ, “ಭೂತಕಾಲವನ್ನು ಗೌರವಿಸುವ, ವರ್ತಮಾನವನ್ನು ಆಚರಿಸುವ ಮತ್ತು ಭವಿಷ್ಯವನ್ನು ಪ್ರೇರೇಪಿಸುವ ಸಂಗೀತಕ್ಕೆ ನಾನು ಬದ್ಧನಾಗಿದ್ದೇನೆ” ಎಂದು ರೆಹಮಾನ್ ಹೇಳಿದರು.
ಇತ್ತೀಚೆಗೆ ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್‌ನಲ್ಲಿ ಕೆಲಸದ ಅವಕಾಶಗಳು ಕಡಿಮೆಯಾಗಿರುವ ಕುರಿತು ಮಾತನಾಡಿದ್ದ ರೆಹಮಾನ್, ಸೃಜನಶೀಲರಲ್ಲದವರು ನಿರ್ಧಾರ ಕೈಗೊಳ್ಳುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹೇಳಿಕೆಯೇ ವಿವಾದಕ್ಕೆ ಕಾರಣವಾಗಿತ್ತು.


























































