ಚೆನ್ನೈ: ಕರೂರ್ ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ವಿಜಯ್ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಮತ್ತೆ ಸಮನ್ಸ್ ಜಾರಿ ಮಾಡಿದೆ. ಸೋಮವಾರ ನವದೆಹಲಿಯ ಸಿಬಿಐ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.
ಸೆಪ್ಟೆಂಬರ್ 27, 2025ರಂದು ಕರೂರಿನಲ್ಲಿ ಟಿವಿಕೆ ರಾಜಕೀಯ ಪ್ರಚಾರದ ವೇಳೆ ಭಾರಿ ಜನಸಂದಣಿ ಜಮಾಯಿಸಿದ್ದರಿಂದ ನಡೆದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು. ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಸಿಬಿಐ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸಮಿತಿ ಮೇಲ್ವಿಚಾರಣೆ ಮಾಡುತ್ತಿದೆ. ಈಗಾಗಲೇ ಪಕ್ಷದ ಹಲವು ಹಿರಿಯ ನಾಯಕರು ಮತ್ತು ಕಾರ್ಯಕರ್ತರನ್ನು ಸಿಬಿಐ ವಿಚಾರಣೆ ನಡೆಸಿದ್ದು, ಅವರ ಹೇಳಿಕೆಗಳ ಆಧಾರದಲ್ಲಿ ವಿಜಯ್ ಅವರನ್ನು ನೇರವಾಗಿ ಪ್ರಶ್ನಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಜನವರಿ 12ರಂದು ವಿಜಯ್ ಸಿಬಿಐ ಮುಂದೆ ಹಾಜರಾಗಿ ವಿಚಾರಣೆಗೆ ಒಳಗಾಗಿದ್ದರು. ಇದೀಗ ಪೊಂಗಲ್ ಹಬ್ಬದ ನಂತರ ಮುಂದಿನ ಹಂತದ ವಿಚಾರಣೆಗೆ ಮತ್ತೆ ಸಮನ್ಸ್ ನೀಡಲಾಗಿದ್ದು, ವಿಜಯ್ ಇಂದು ಸಂಜೆ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


























































