ಬೆಂಗಳೂರು: ದಕ್ಷಿಣ ಭಾರತದ ಪ್ರಭಾವಿ ಕ್ರೈಸ್ತ ಸಮುದಾಯವಾಗಿರುವ CSI-KCD ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ. CSI ಬಿಷಪ್ ವಿರುದ್ದದ KGF ಬಿಷಪ್ ಕಾಟನ್ ಸ್ಕೂಲ್ ಗೋಲ್ಮಾಲ್ ಪ್ರಕರಣ ಬಗ್ಗೆ ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿಲ್ಲ ಎಂದು ಸಮುದಾಯದ ಪ್ರಮುಖರು ರೊಚ್ಚಿಗೆದ್ದಿದ್ದಾರೆ.
ಪೊಲೀಸರ ನಿರ್ಲಕ್ಷ್ಯದಿಂದಾಗಿ ಆರೋಪಿಗಳಿಗೆ ಅನುಕೂಲವಾಗುತ್ತಿದೆ ಎಂದಿರುವ ಒಂದು ಗುಂಪು ಇದೀಗ ಸಿಐಡಿ ತನಿಖೆಗೆ ಒತ್ತಾಯಿಸಿದೆ. CSI ಸದಸ್ಯ ಜೋಸೆಫ್ ಶಾಂತರಾಜ್ ಎಂಬವರು ಈ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಗೆ ಬುಧವಾರ (07.01.2026) ದೂರು ಸಲ್ಲಿಸಿದ್ದು, ಒಟ್ಟಾರೆ ಬೆಳವಣಿಗೆಗಳಿಗೆ ರೋಚಕತೆ ಸಿಕ್ಕಿದೆ.
KGFನಲ್ಲಿ ಬಿಷಪ್ ಕಾಟನ್ ಶಾಲೆ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರ (KUDA) ದಲ್ಲಿ ಕಾನೂನು ಬಾಹಿರವಾಗಿ ಖಾತಾ ಮತ್ತು ಇತರ ಅನುಮತಿ ಪಡೆಯಲು ಸರ್ಕಾರಿ ಕಂದಾಯ ಭೂಮಿ ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿ ಸಂತ ಜಾನ್ಸ್ ಚರ್ಚ್’ನ ಸಬ್ಸೆಪ್ಷನ್ ಸದಸ್ಯ ಜೋಸೆಫ್ ಶಾಂತರಾಜ್ ಎಂಬವರು 2023ರಲ್ಲೇ ದೂರು ಸಲ್ಲಿಸಿದ್ದರು. ಅದರಂತೆ ರಾಬರ್ಟ್ಸನ್ ಪೇಟ್ ಪೊಲೀಸರು FIR (Cr.No.:114/2023) ದಾಖಲಿಸಿದ್ದರು. ತನಿಖಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಆರೋಪಿಗಳಾದ ಈಗಿನ ಬಿಷಪ್ ವಿನ್ಸೆಂಟ್ ವಿನೋದ್ ಕುಮಾರ್ ಮತ್ತು ಇತರರು ಹೈಕೋರ್ಟ್’ನಲ್ಲಿ ದಾವೆ (WP ಸಂಖ್ಯೆ 17104/2023) ಹೂಡಿ ತಡೆಯಾಜ್ಞೆ ತಂದಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಪೀಠವು ದಿನಾಂಕ: 28.10.2025 ರಂದು ತಡೆಯಾಜ್ಞೆ ತೆರವುಗೊಳಿಸಿ, ತ್ವರಿತವಾಗಿ ತನಿಖೆ ನಡೆಸಲು ನಿರ್ದೇಶನ ನೀಡಿತ್ತು.
ಆದರೆ ಹೈಕೋರ್ಟ್ ನಿರ್ದೇಶನಕ್ಕೆ KGF ಪೊಲೀಸರು ಕ್ಯಾರೇ ಅನ್ನುತ್ತಿಲ್ಲ. ತನಿಖೆ ನಡೆಸುತ್ತಿರುವ ಪಿಎಸ್ಐ ತಮ್ಮ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ ಎಂದು ಪೊಲೀಸ್ ಠಾಣಾ ಮೂಲಗಳು ತಿಳಿಸುತ್ತಿದೆಯಾದರೂ ಈಗಿನ್ನೂ ನ್ಯಾಯಾಲಯಕ್ಕೆ ವರದಿ ನೀಡಿಲ್ಲ. ಈ ವಿಳಂಬಕ್ಕೆ ಮೇಲಧಿಕಾರಿಗಳ ಒತ್ತಡ ಇದೆಯೇ ಎಂಬ ಅನುಮಾನವನ್ನು ಜೋಸೆಫ್ ಶಾಂತರಾಜ್ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ತನಿಖಾಧಿಕಾರಿಗಳ ಲೋಪದ ಬಗ್ಗೆ ಆಕ್ಷೇಪಿಸಿರುವ ಜೋಸೆಫ್ ಶಾಂತರಾಜ್, ತಾನು 04.11.2025ರಂದು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿ ಕೋರ್ಟ್ ಆದೇಶದಂತೆ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದರು. ಈ ಬಗ್ಗೆ KGF ರಾಬರ್ಟ್ಸನ್ ಪೇಟ್ ವೃತ್ತನಿರೀಕ್ಷಕರು ಅನಗತ್ಯ ಹಿಂಬರಹ ನೀಡುತ್ತಿದ್ದಾರೆಯೇ ಹೊರತು, ನ್ಯಾಯಾಲಯದ ನಿರ್ದೇಶನದಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ಇಂದು (07.01.2026) ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರುಗೆ ಮತ್ತೊಂದು ದೂರು ನೀಡಿದ್ದಾರೆ. ಈಗಿನ ತನಿಖಾಧಿಕಾರಿಗಳ ಈ ನಿಧಾನಗತಿ ನಡೆಯು ಆರೋಪಿಗಳಿಗೆ ವರದಾನವಾಗುವ ಆತಂಕ ಇದೆ. ಹಾಗಾಗಿ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಅವರು ಕೋರಿದ್ದಾರೆ.



















































